ದುಬೈ: ಅಂತಾರಾಷ್ಟ್ರೀಯ ಟಿ - 20 ವಿಶ್ವಕಪ್ ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ದುಬೈನಲ್ಲಿ ನಡೆಯಲಿದ್ದು, ಈಗಾಗಲೇ ಇದಕ್ಕಾಗಿ ವೇಳಾಪಟ್ಟಿ ಕೂಡ ರಿಲೀಸ್ ಆಗಿದೆ. ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಎಲ್ಲ ತಂಡಗಳಿಗೆ ಮತ್ತೊಂದು ಮಹತ್ವದ ಸೂಚನೆ ಹೊರಡಿಸಿದೆ.
ಟಿ-20 ವಿಶ್ವಕಪ್‌ನಲ್ಲಿ ಭಾಗಿಯಾಗಲು 15 ಆಟಗಾರರು ಹಾಗೂ 8 ಸಿಬ್ಬಂದಿಗಳಿಗೆ ಮಾತ್ರ ಐಸಿಸಿ ಅವಕಾಶ ನೀಡಿದ್ದು, ಸೆಪ್ಟೆಂಬರ್ 10ರೊಳಗೆ ಈ ಸಿಬ್ಬಂದಿಗಳ ಹೆಸರು ನೀಡಲು ಅಂತಿಮ ದಿನ ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್(ಪಿಸಿಬಿ), ಮಾಹಿತಿ ಹಂಚಿಕೊಂಡಿದ್ದು, 15 ಆಟಗಾರರು, ಪ್ರಮುಖ ಕೋಚ್ ಹಾಗೂ ಸಹಾಯಕ ಸಿಬ್ಬಂದಿಗಳು ಇದರಲ್ಲಿ ಸೇರಿಕೊಂಡಿರುತ್ತಾರೆ ಎಂದು ತಿಳಿಸಿದೆ.
ಕೊರೊನಾ ವೈರಸ್ ಬಿಕ್ಕಟ್ಟು ಹೆಚ್ಚಾಗಿರುವ ಕಾರಣ ಬಯೋಬಬಲ್ ಹಿನ್ನೆಯಲ್ಲಿ ಹೆಚ್ಚುವರಿ ಆಟಗಾರರನ್ನ ಕರೆತರಲೂ ಐಸಿಸಿ ಅವಕಾಶ ನೀಡಿದೆ. ಆದರೆ, ಈ ಆಟಗಾರರ ವೆಚ್ಚವನ್ನ ಆಯಾ ದೇಶಗಳ ಕ್ರಿಕೆಟ್ ಮಂಡಳಿ ಭರಿಸಬೇಕೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿರಿ: ಅಕ್ಟೋಬರ್ 17ರಿಂದ T-20 World Cup.. ICCಯಿಂದ ಮಹತ್ವದ ಮಾಹಿತಿ
ಈ ಸಲದ ವಿಶ್ವಕಪ್ ದುಬೈನಲ್ಲಿ ನಡೆಯಲಿದ್ದು, ಪಾಕ್-ಭಾರತ ಒಂದೇ ಗ್ರೂಪ್ನಲ್ಲಿವೆ. ಎಲ್ಲ ಪಂದ್ಯಗಳು ದುಬೈ, ಅಬುದಾಬಿ, ಶಾರ್ಜಾ ಮೈದಾನದಲ್ಲಿ ನಡೆಯಲಿವೆ. ಈ ಟೂರ್ನಿಯಲ್ಲಿ ಭಾಗಿಯಾಗಲು ಎಂಟು ತಂಡಗಳು ಈಗಾಗಲೇ ಅರ್ಹತೆ ಗಿಟ್ಟಿಸಿಕೊಂಡಿವೆ. ಉಳಿದಂತೆ 4 ತಂಡಗಳು ಅರ್ಹತಾ ಪಂದ್ಯದಲ್ಲಿ ಭಾಗಿಯಾಗಲಿವೆ. ಟಿ-20 ವಿಶ್ವಕಪ್‌ನಲ್ಲಿ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಪಂದ್ಯ ಅಕ್ಟೋಬರ್ 24ರಂದು ದುಬೈನಲ್ಲಿ ನಡೆಯಲಿದೆ ಎಂದು ಈಗಾಗಲೇ ತಿಳಿದು ಬಂದಿದೆ. ಟಿ-20 ವಿಶ್ವಕಪ್ಗಾಗಿ ಈಗಾಗಲೇ ನ್ಯೂಜಿಲ್ಯಾಂಡ್ ತಂಡ 15 ಸದಸ್ಯರ ಬಳಗ ಘೋಷಣೆ ಮಾಡಿದೆ.