ಲಂಡನ್: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸತತ 6 ಪಂದ್ಯಗಳಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿದ್ದ ಕೊಹ್ಲಿ ಪಡೆಗೆ ಇಂಗ್ಲೆಂಡ್ ವಿರುದ್ಧ ಭಾನುವಾರ ಸೋಲು ಎದುರಾಗಿದೆ. ಇಂಗ್ಲೆಂಡ್ ವಿರುದ್ಧದ ಸೋಲು ಕ್ರಿಕೆಟ್ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.
ಆಂಗ್ಲರು ನೀಡಿದ್ದ 338 ರನ್ಗಳ ಬೃಹತ್ ಟಾರ್ಗೆಟ್ ತಲುಪುವಲ್ಲಿ ವಿಫಲರಾದ ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಅದರಲ್ಲೂ ಕೇದಾರ್ ಜಾಧವ್ ಹಾಗೂ ಮಾಜಿ ನಾಯಕ ಎಂ ಎಸ್ ಧೋನಿ ಬ್ಯಾಟಿಂಗ್ ಕುರಿತು ತೀವ್ರ ಟೀಕೆ ವ್ಯಕ್ತವಾಗಿದೆ. ಅಲ್ಲದೆ, ಜಾಧವ್ ಅವರನ್ನು ಮುಂಬರುವ ಪಂದ್ಯಗಳಲ್ಲಿ ಆಡುವ ಹನ್ನೊಂದರ ಬಳಗದಿಂದ ಕೈಬಿಡುವ ಸಾಧ್ಯತೆಯಿದೆ.
ನಿನ್ನೆಯ ಪಂದ್ಯದಲ್ಲಿ ಕೊನೆಯ 5.1 ಓವರ್ಗಳಲ್ಲಿ 71 ರನ್ ಗಳಿಸಬೇಕಿದ್ದಾಗ ಕೇದಾರ್ ಕ್ರೀಸ್ಗೆ ಆಗಮಿಸಿದ್ದರು. ಆದರೆ, ಧೋನಿ ಜೊತೆಗೂಡಿ ಪಂದ್ಯವನ್ನು ಗೆಲುವಿನತ್ತ ಕೊಂಡೊಯ್ಯಲು ಯತ್ನಿಸುವಲ್ಲಿಯೂ ಅವರು ವಿಫಲರಾಗಿದ್ದರು. ಇಷ್ಟು ರನ್ ಸೇರಿಸುವುದು ಸುಲಭವಲ್ಲವಾದರೂ ಬರ್ಮಿಂಗ್ಯಾಮ್ನ ಪ್ಲಾಟ್ ಪಿಚ್ ಹಾಗೂ ಚಿಕ್ಕ ಗ್ರೌಂಡ್ನಲ್ಲಿ ಮೇಲುಗೈ ಸಾಧಿಸಬಹುದಿತ್ತು ಎಂಬುದು ಟೀಕಾಕಾರರ ವಾದವಾಗಿದೆ.
ಧೋನಿ 31 ಎಸೆತಗಳಲ್ಲಿ 42 ರನ್ ಗಳಿಸಿದ್ದರೂ ಅದರಲ್ಲಿ 7 ಡಾಟ್ ಬಾಲ್ ಹಾಗೂ 20 ಸಿಂಗಲ್ಸ್ ಗಳಿಸಿದ್ದರು. ಕೊನೆಯ ಓವರ್ನಲ್ಲಿ ಒಂದು ಸಿಕ್ಸರ್ ಸಿಡಿಸಿದ್ದು, ಬಿಟ್ಟರೆ ತಂಡವನ್ನು ಜಯದತ್ತ ಕೊಂಡೊಯ್ಯುವ ಯಾವುದೇ ಪ್ರಯತ್ನ ಅವರ ಬ್ಯಾಟಿಂಗ್ನಲ್ಲಿ ಕಂಡುಬರಲಿಲ್ಲ. ಅಲ್ಲದೆ ಜಾಧವ್ ಕೂಡ 13 ಎಸೆತಗಳಲ್ಲಿ ಕೇವಲ 12 ರನ್ ಗಳಿಸಿದ್ದರು. ಈ ಹಿಂದೆಯೂ ಕೂಡ ಅಪ್ಘಾನಿಸ್ತಾನ ವಿರುದ್ಧ ಧೋನಿ ಹಾಗೂ ಜಾಧವ್ ನಿಧಾನಗತಿಯ ಬ್ಯಾಟಿಂಗ್ ನಡೆದಿದ್ದ ಬಗ್ಗೆ ಸಚಿನ್ ಸೇರಿದಂತೆ ಹಲವರಿಂದ ಟೀಕೆ ವ್ಯಕ್ತವಾಗಿತ್ತು. ನಿನ್ನೆಯ ಪಂದ್ಯದ ಬಗ್ಗೆ ಮಾಜಿ ನಾಯಕ ಗಂಗೂಲಿ ಸಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಇನ್ನು ಟೀಂ ಇಂಡಿಯಾ ಸೆಮಿಫೈನಲ್ ಕನಸಿಗೆ ಇಂಗ್ಲೆಂಡ್ ವಿರುದ್ಧ ಸೋಲಿನಿಂದ ಯಾವುದೇ ಪರಿಣಾಮವಿಲ್ಲದಿದ್ದರೂ ಕೂಡ ಮುಂಬರುವ ಪಂದ್ಯಗಳಲ್ಲಿ ತಂಡದಲ್ಲಿ ಬದಲಾವಣೆ ಮಾಡುವ ಸಾಧ್ಯತೆಯಿದೆ. ಇನ್ನು ನಾಳಿನ ಬಾಂಗ್ಲಾ ವಿರುದ್ಧದ ಪಂದ್ಯದಿಂದ ಜಾಧವ್ರನ್ನು ಕೈಬಿಡುವ ಸಾಧ್ಯತೆಯಿದೆ. ರವೀಂದ್ರ ಜಡೆಜಾಗೆ 11ರ ಬಳಗದಲ್ಲಿ ಸ್ಥಾನ ಸಿಗಬಹುದಾಗಿದೆ. ಜಡೇಜಾ ಇದುವರೆಗೂ ಕೂಡ ಪ್ರಸಕ್ತ ವಿಶ್ವಕಪ್ನಲ್ಲಿ ಆಡುವ ಅವಕಾಶದಿಂದ ವಂಚಿತರಾಗಿದ್ದಾರೆ.