ಕ್ಯಾನ್ಬೆರಾ (ಆಸ್ಟ್ರೇಲಿಯಾ): ಏಕದಿನ ಸರಣಿಯಲ್ಲಿ ಕೊನೆಯ ಪಂದ್ಯ ಗೆದ್ದಿರುವ ವಿಶ್ವಾಸದಲ್ಲಿರುವ ಭಾರತ ತಂಡ ಇಂದು ನಡೆಯಲಿರುವ ಟಿ-20 ಸರಣಿಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಕಠಿಣ ಪೈಪೋಟಿ ನೀಡಲು ಸಜ್ಜಾಗಿದೆ. ಈಗಾಗಲೇ ಕೊನೆ ಏಕದಿನ ಪಂದ್ಯದಲ್ಲಿ ಎಲ್ಲ ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರಿರುವ ಟೀಂ ಇಂಡಿಯಾದಲ್ಲಿ ಇಂದಿನ ಪಂದ್ಯಕ್ಕೆ ಸಾಕಷ್ಟು ಆಯ್ಕೆಗಳು ತೆರೆದು ಕೊಂಡಿವೆ.
1-2ರಲ್ಲಿ ಕೊಹ್ಲಿ ಬಳಗ 50 ಓವರ್ಗಳ ಸರಣಿಯನ್ನು ಕಳೆದುಕೊಂಡಿದೆ. ಸುದೀರ್ಘ ಸಮಯದ ನಂತರ ಏಕದಿನ ಕ್ರಿಕೆಟ್ಗೆ ಮರಳಿದ್ದು, 2 ತಿಂಗಳ ಕಾಲ ಐಪಿಎಲ್ನಲ್ಲಿ ಆಡಿದ್ದರಿಂದ ಏಕದಿನ ಕ್ರಿಕೆಟ್ಗೆ ಪರಿವರ್ತನೆಗೊಳ್ಳಲು ಭಾರತೀಯ ಆಟಗಾರರು ವಿಫಲರಾಗಿದ್ದರು. ಆದರೆ, ಟಿ-20ಯಲ್ಲಿ ಮಾತ್ರ ತಂಡದಲ್ಲಿರುವ ಬಹುಪಾಲು ಆಟಗಾರರು ಪ್ರಚಂಡ ಫಾರ್ಮ್ನಲ್ಲಿರುವುದರಿಂದ ಆಸ್ಟ್ರೇಲಿಯಾಗೆ ಕಠಿಣ ಸವಾಲು ಎದುರಾಗಲಿದೆ.
ವಾಷಿಂಗ್ಟನ್ ಸುಂದರ್, ದೀಪಕ್ ಚಹಾರ್ ಹಾಗೂ ಟಿ ನಟರಾಜನ್ ಟಿ-20 ತಂಡಕ್ಕೆ ಸೇರಿಕೊಳ್ಳಲಿದ್ದಾರೆ. ಹಾಗಾಗಿ ತಂಡದ ಸಮತೋಲನ ಕೂಡ ಸಾಧ್ಯವಾಗಲಿದೆ. ಸುಂದರ್ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದಾರೆ. ಆರ್ಸಿಬಿ ನಾಯಕರಾಗಿದ್ದ ಕೊಹ್ಲಿ, ಅವರನ್ನು ಪವರ್ ಪ್ಲೇನಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದರು. ಬೌಲರ್ಗಳು ವಿಫಲರಾದರೆ ಆಲ್ರೌಂಡರ್ ಪಾಂಡ್ಯ ಅವರನ್ನು ಕೂಡ ಒಂದೆರೆಡು ಓವರ್ಗಳಲ್ಲಿ ಬಳಿಸಿಕೊಳ್ಳಲು ಕೊಹ್ಲಿಗೆ ಅವಕಾಶವಿದೆ.
ಯಾರ್ಕರ್ ಸ್ಪೆಷಲಿಸ್ಟ್ ಟಿ. ನಟರಾಜನ್ ತಂಡಕ್ಕೆ ಹೆಚ್ಚುವರಿ ಬೋನಸ್ ಆಗಿದ್ದಾರೆ. ಏಕದಿನ ತಂಡದ ಡೆಬ್ಯೂಟ್ನಲ್ಲೇ ಗಮನ ಸೆಳೆದಿರುವ ಅವರು ಟಿ-20ಗೂ ಪದಾರ್ಪಣೆ ಮಾಡಿದರೆ ಅಚ್ಚರಿಯಿಲ್ಲ. ಆದರೆ ಶಮಿ ಮತ್ತು ಚಹಾರ್ ನಡುವೆ ಕೊಹ್ಲಿ ಯಾರನ್ನು ಆಯ್ಕೆ ಮಾಡಲಿದ್ದಾರೆ ಎನ್ನುವುದೇ ಆಸಕ್ತಿದಾಯಕ ವಿಚಾರವಾಗಿದೆ. ಇನ್ನು ಏಕದಿನ ಸರಣಿಯಲ್ಲಿ ಮರೆಯಾಗದ ವೈಫಲ್ಯ ಅನುಭವಿಸಿರುವ ಚಹಾಲ್ ಕೂಡ ಟಿ-20 ಸರಣಿಯಲ್ಲಿ ಬೌನ್ಸ್ಬ್ಯಾಕ್ ಮಾಡಲು ಕಾತುರದಿಂದಿದ್ದಾರೆ.
ನ್ಯೂಜಿಲ್ಯಾಂಡ್ ಸರಣಿಯಲ್ಲಿ ಆರಂಭಿಕರಾಗಿ ಮಿಂಚಿದ್ದ ಕೆಎಲ್ ರಾಹುಲ್ ಇಂದಿನ ಸರಣಿಯಲ್ಲೂ ಆರಂಭಿಕನಾಗಿ ಧವನ್ ಜೊತೆ ಕಣಕ್ಕಿಳಿಯಲಿದ್ದಾರೆ. ಐಪಿಎಲ್ನಲ್ಲಿ ರಾಹುಲ್ ಆರೆಂಜ್ ಕ್ಯಾಪ್ ಪಡೆದಿದ್ದರು. ಇನ್ನು ಕೊಹ್ಲಿ, ಹಾರ್ದಿಕ್ ಪಾಂಡ್ಯ ಉತ್ತಮ ಲಯದಲ್ಲಿದ್ದಾರೆ. ಏಕದಿನ ಸರಣಿಯಲ್ಲಿ ತೋರಿದ ಪ್ರದರ್ಶನವನ್ನು ತಾವೂ ಮುಂದುವರಿಸಲು ಕಾಯುತ್ತಿದ್ದಾರೆ. ಆದರೆ, 4ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದರೂ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾಗಿದ್ದರು. ಆದರೆ, ಐಪಿಎಲ್ನಲ್ಲಿ 4ನೇ ಕ್ರಮಾಂಕದಲ್ಲಿ ಜವಾಬ್ದಾರಿಯುತ ಪ್ರದರ್ಶನ ತೋರಿರುವುದು ಕೂಡ ಇಲ್ಲಿ ಸ್ಮರಿಸಬಹುದು.
ಆಸ್ಟ್ರೇಲಿಯಾ ಏಕದಿನ ಸರಣಿ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದ ವಾರ್ನರ್ ಸೇವೆ ಕಳೆದುಕೊಳ್ಳಲಿದೆ. ಇದೀಗ ಅವರ ಸ್ಥಾನಕ್ಕೆ ಲಾಬುಶೇನ್ ಅಥವಾ ಸ್ಟೋಯ್ನಿಸ್ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಬಹುದು. ಆದರೆ ಈ ಬಗ್ಗೆ ಖಚಿತವಿಲ್ಲ. ಕೊನೆಯ ಏಕದಿನ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಕಮ್ಮಿನ್ಸ್ ಮತ್ತು ಸ್ಟಾರ್ಕ್ ಮತ್ತೆ ಮರಳುವ ಸಾಧ್ಯತೆಯಿದೆ.
ಭಾರತ ಸಂಭಾವ್ಯ ತಂಡ: ವಿರಾಟ್ ಕೊಹ್ಲಿ (ಕ್ಯಾಪ್ಟನ್), ಶಿಖರ್ ಧವನ್, ಮಾಯಾಂಕ್ ಅಗರ್ವಾಲ್, ಕೆ.ಎಲ್ ರಾಹುಲ್( ವಿ.ಕೀ, ಮತ್ತು ಉ.ನಾಯಕ), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಸಂಜು ಸಾಮ್ಸನ್(ವಿ.ಕೀ), ರವೀಂದ್ರ ಜಡೇಜಾ,ವಾಷಿಂಗ್ಟನ್ ಸುಂದರ್,ಯುಜ್ವೇಂದ್ರ ಚಹಾಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ದೀಪಕ್ ಚಹಾರ್, ವರುಣ್ ಚಕ್ರವರ್ತಿ
ಆಸ್ಟ್ರೇಲಿಯಾ ಸಂಭಾವ್ಯ ತಂಡ: ಆ್ಯರೋನ್ ಫಿಂಚ್(ನಾಯಕ), ಸೀನ್ ಅಬ್ಬೋಟ್, ಆಸ್ಟನ್ ಅಗರ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್(ಉಪನಾಯಕ), ಕ್ಯಾಮರೋನ್ ಗ್ರೀನ್, ಜೋಶ್ ಹೇಜಲ್‌ವುಡ್, ಮೊಯಿಸ್ ಹೆನ್ರಿಕೇಸ್, ಮಾರ್ನಸ್ ಲಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಡೇನಿಯಲ್ ಸ್ಯಾಮ್ಸ್, ಕೇನ್ ರಿಚರ್ಡ್‌ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯ್ನಿಸ್,ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆಡಂ ಜಂಪಾ.