ಮುಂಬೈ: ಪ್ರತಿ ವರ್ಷ ಐಸಿಸಿ ನೀಡುವ ಟೆಸ್ಟ್ ಚಾಂಪಿಯನ್ ಶಿಪ್ ಟ್ರೋಫಿ ಗದೆ ಭಾರತದ ಪಾಲಾಗಿದೆ. ಅಂತಾರಾಷ್ಟ್ರೀಯ ಟೆಸ್ಟ್ ರ್ಯಾಂಕಿಂಗ್ನಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸತತ ಮೂರನೇ ವರ್ಷ ಟೆಸ್ಟ್ ಚಾಂಪಿಯನ್ ಶಿಪ್ ಗದೆ ತನ್ನದಾಗಿಸಿಕೊಂಡಿದೆ.
ಏಪ್ರಿಲ್ 1ರ ವೇಳಗೆ ಟೆಸ್ಟ್ ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡಕ್ಕೆ ಟೆಸ್ಟ್ ಚಾಂಪಿಯನ್ಷಿಪ್ ಪ್ರಶಸ್ತಿಯನ್ನು(ಗದೆ) ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ನೀಡುತ್ತದೆ. ಈ ಪ್ರಶಸ್ತಿಯನ್ನು 2003 ರಿಂದ ಐಸಿಸಿ ನೀಡುತ್ತಾ ಬಂದಿದೆ. ಟೆಸ್ಟ್ನಲ್ಲಿ ಈ ಚಾಂಪಿಯನ್ಶಿಪ್ ಗದೆ ಗೆಲ್ಲುವ ತಂಡಕ್ಕೆ ಐಸಿಸಿಯಿಂದ 6,92,62,500.00 (6.92 ಕೋಟಿ )ರೂ ಮೊತ್ತ ಸಿಗಲಿದೆ. ಇದೀಗ ಇಷ್ಟೊಂದು ಹಣ ಭಾರತೀಯ ಕ್ರಿಕೆಟ್ ಮಂಡಳಿ ಪಾಲಾಗಿದೆ.
ಇದರ ಜತೆಗೆ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ವಿಶ್ವದ ನಂಬರ್ ಒನ್ ಟೆಸ್ಟ್ ಬ್ಯಾಟ್ಸ್ಮನ್ ಎಂಬ ಪಟ್ಟವನ್ನೂ ನೀಡಿ ಗೌರವಿಸಿದೆ. ಇತ್ತ ಟೆಸ್ಟ್ ಶ್ರೇಯಾಂಕದಲ್ಲಿ 2ನೇ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್ 3,46,31,250.00(3.46ಕೋಟಿ) ರೂ ಮೊತ್ತ ಹಾಗೂ ಮೂರನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ 1,38,52,500.00 ರೂ ಮೊತ್ತ ಹಾಗೂ 4ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ 69,26,500.00(69ಲಕ್ಷ) ರೂ ಮೊತ್ತ ಪಡೆದುಕೊಳ್ಳಲಿದೆ.
ಇದೇ ವಿಷಯವಾಗಿ ಮಾತನಾಡಿರುವ ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿ, ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಮತ್ತೊಮ್ಮೆ ಪಡೆದುಕೊಂಡಿದ್ದಕ್ಕಾಗಿ ಹೆಮ್ಮೆ ಇದೆ. ಟೆಸ್ಟ್ನಲ್ಲಿ ನಮ್ಮ ತಂಡದ ಅದ್ಭುತ ಪ್ರದರ್ಶನ ನೀಡುತ್ತಿದೆ. ಮುಂದಿನ ದಿನಗಳಲ್ಲೂ ಇದು ಮುಂದುವರೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.