ಮುಂಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಅವರು ಬ್ಯಾಟಿಂಗ್ ಪ್ರದರ್ಶನ ಮತ್ತು ತಂಡವನ್ನು ಮುಂದೆ ನಿಂತು ಮುನ್ನಡೆಸುತ್ತಿರುವುದನ್ನ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಮೆಚ್ಚಿಕೊಂಡಿದ್ದಾರೆ. ರಾಹುಲ್ ಸಾಧನೆಗೆ ಕಾರಣ ನೀಡಿರುವ ಅವರು, ಬೆಳೆದು ಬಂದಿರುವುದು ಬೆಂಗಳೂರು ನೀರು ಕುಡಿದು ಎಂದು ಮನಸಾರೆ ಕೊಂಡಾಡಿದ್ದಾರೆ.
ರಾಹುಲ್ 2020ರ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ನಾಯಕರಾಗಿದ್ದಾರೆ. ಜೊತೆಗೆ ಆರಂಭಿಕ ಬ್ಯಾಟ್ಸ್ಮನ್ ಆಗಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿರುವ ರಾಹುಲ್ ಗರಿಷ್ಠ ರನ್ ಸ್ಕೋರರ್ ಆಗಿ ಆರೆಂಜ್ ಕ್ಯಾಪ್ ಅನ್ನು ತಮ್ಮಲ್ಲೇ ಉಳಿಸಿಕೊಂಡು ಬರುತ್ತಿದ್ದಾರೆ. ಇವರ ನೇತೃತ್ವದಲ್ಲಿ ಪಂಜಾಬ್ ತಂಡ ಆಡಿರುವ 10 ಪಂದ್ಯಗಳಲ್ಲಿ 4 ಗೆಲುವು ಹಾಗೂ 6 ಸೋಲುಗಳೊಡನೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.
ಸತತ ಸೋಲಿನಿಂದ ಕಂಗೆಟ್ಟಿದ್ದ ಪಂಜಾಬ್ ನಂತರ ಟಾಪ್ ಮೂರು ತಂಡಗಳನ್ನೇ ಬಗ್ಗುಬಡಿದು ಪ್ಲೇ ಆಫ್ ರೇಸ್ಗೆ ಮರಳಿದೆ. ಡೆಲ್ಲಿ ವಿರುದ್ಧದ ಪಂದ್ಯದ ನಂತರ ಮಾತನಾಡಿರುವ ಗವಾಸ್ಕರ್, ರಾಹುಲ್ ಯಶಸ್ಸಿನ ಗುಟ್ಟನ್ನು ಬಹಿರಂಗಪಡಿಸಿದ್ದಾರೆ.
" ಅದು ಬೆಂಗಳೂರು ನೀರಿನ ಪ್ರಭಾವ. ಕೇವಲ ಕ್ರಿಕೆಟ್ನಲ್ಲಿ ಮಾತ್ರವಲ್ಲ. ಎಲ್ಲ ರೀತಿಯ ಕ್ರೀಡೆಯಲ್ಲೂ ಬೆಂಗಳೂರು ಹಲವಾರು ವಿಶ್ವ ದರ್ಜೆಯ ಕ್ರೀಡಾಪಟುಗಳನ್ನು ತಯಾರು ಮಾಡಿದೆ. ಪ್ರಕಾಶ್ ಪಡುಕೋಣೆ ನನ್ನ ಸಾರ್ವಕಾಲಿಕ ನೆಚ್ಚಿನ ಕ್ರೀಡಾಪಟು. ಗುಂಡಪ್ಪ ವಿಶ್ವನಾಥ್, ಎರಪಳ್ಳಿ ಪ್ರಸನ್ನ, ಕುಂಬ್ಳೆ, ರಾಹುಲ್ ದ್ರಾವಿಡ್ ಸೇರಿದಂತೆ ಬೆಂಗಳೂರು ಹಲವು ವಿಶ್ವದರ್ಜೆಯ ಅಥ್ಲೀಟ್ಗಳನ್ನು ನೀಡಿದೆ. ಹಾಗಾಗಿ ರಾಹುಲ್ ಪ್ರದರ್ಶನಕ್ಕೆ ಬಹುಶಃ ಬೆಂಗಳೂರು ನೀರು ಕಾರಣ" ಎಂದು ಭಾರತ ಕಂಡ ಶ್ರೇಷ್ಠ ಕ್ರಿಕೆಟಿಗ ಗವಾಸ್ಕರ್ ಹೇಳಿದ್ದಾರೆ.
13ನೇ ಆವೃತ್ತಿಯಲ್ಲಿ ರಾಹುಲ್ 10 ಪಂದ್ಯಗಳಿಂದ 5 ಅರ್ಧಶತಕ ಹಾಗೂ ಒಂದು ಶತಕದ ನೆರವಿನೊಂದಿಗೆ 525 ರನ್ಗಳಿಸಿದ್ದಾರೆ.