ಹಂಬಂಟೋಟ(ಶ್ರೀಲಂಕಾ): ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಶ್ರೀಲಂಕಾಗೆ ಸೋಮವಾರ ಬಂದಿಳಿದಿದ್ದ ಇಂಗ್ಲೆಂಡ್ ತಂಡದ ಆಟಗಾರರ ಪೈಕಿ ಆಲ್ರೌಂಡರ್ ಮೊಯೀನ್ ಅಲಿ ಅವರಿಗೆ ಕೊರೊನಾ ದೃಢಪಟ್ಟಿದ್ದು, 10 ದಿನಗಳ ಕಾಲ ಸೆಲ್ಫ್ ಐಸೋಲೇಶನ್ನಲ್ಲಿರಲಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಖಚಿತಪಡಿಸಿದೆ.
ಇಂಗ್ಲೆಂಡ್ನಲ್ಲಿ ಕೊರೊನಾ ರೂಪಾಂತರಗೊಂಡಿರುವುದರಿಂದ ಶ್ರೀಲಂಕಾ ಸರ್ಕಾರ ಯುಕೆಯಿಂದ ಬರುವ ವಿಮಾನಗಳನ್ನು ಅಮಾನತುಗಳಿಸಿದೆ. ಹಾಗಾಗಿ ಇಂಗ್ಲೆಂಡ್ ತಂಡ ಲಂಡನ್ನಿಂದ ಚಾರ್ಟೆಡ್ ಫ್ಲೈಟ್ ಮೂಲಕ ಶ್ರೀಲಂಕಾದ ಹಂಬಂಟೋಟಗೆ ಬಂದಿಳಿದಿತ್ತು. ಇಲ್ಲಿಗೆ ಬರುವ ಮುನ್ನ ಲಂಡನ್ನಲ್ಲಿ ಎಲ್ಲಾ ಆಟಗಾರರು ಮತ್ತು ಸಿಬ್ಬಂದಿ ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ಪಡೆದಿದ್ದರು.
ಜನವರಿ 4ರಂದು ಸೋಮವಾರ ಹಂಬಂಟೋಟಗೆ ಬಂದಿಳಿದ ನಂತರ ಎಲ್ಲಾ ಆಟಗಾರರು ಪಿಸಿಆರ್ ಟೆಸ್ಟ್ಗೆ ಒಳಗಾಗಿದ್ದು, ಅದರಲ್ಲಿ ಮೊಯೀನ್ ಅಲಿ ಕೋವಿಡ್-19 ಪಾಸಿಟಿವ್ ವರದಿ ಪಡೆದಿದ್ದಾರೆ ಎಂದು ಇಸಿಬಿ ಹೇಳಿಕೆ ಬಿಡುಗಡೆ ಮಾಡಿದೆ.
ಇದೀಗ ಮೊಯೀನ್ ಅಲಿಗೆ 10 ದಿನಗಳ ಸೆಲ್ಫ್ ಐಸೋಲೇಶನ್ನಲ್ಲಿರಲು ಸೂಚಿಸಲಾಗಿದೆ. ಹಾಗೂ ಇವರ ಜೊತೆಗೆ ಹೆಚ್ಚು ಸಂಪರ್ಕದಲ್ಲಿದ್ದ ಆಲ್ರೌಂಡರ್ ಕ್ರಿಸ್ ವೋಕ್ಸ್ರನ್ನು ಕೂಡ ಮುಂಜಾಗ್ರತಾ ಕ್ರಮವಾಗಿ ಐಸೋಲೇಶನ್ನಲ್ಲಿರಲು ಸೂಚಿಸಲಾಗಿದೆ. ಇಂಗ್ಲೆಂಡ್ ತಂಡ ಶ್ರೀಲಂಕಾ ವಿರುದ್ಧ ಗಾಲೆಯಲ್ಲಿ 14ರಿಂದ 18 ಮತ್ತು 22ರಿಂದ 26ರವರೆಗೆ 2ನೇ ಟೆಸ್ಟ್ ಆಡಲಿದೆ.