ಮುಂಬೈ: 2020 ಮಾರ್ಚ್ ತಿಂಗಳಲ್ಲಿ ಬಿಸಿಬಿ ಆಯೋಜಿಸುವ ಏಷ್ಯಾ ಇಲೆವೆನ್ ಹಾಗೂ ವಿಶ್ವ ಇಲೆವೆನ್ ನಡುವೆ ಆಯೋಜಿಸುತ್ತಿರುವ ಎರಡು ಟಿ-20 ಪಂದ್ಯಗಳಿಗೆ ಪಾಕಿಸ್ತಾನದ ಆಟಗಾರರಿಗೆ ಅವಕಾಶವಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಮುಂದಿನ ವರ್ಷದ ಬಾಂಗ್ಲಾದೇಶದ ಸಂಸ್ಥಾಪಕ ಶೇಖ್ ಮುಜುಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಏಷ್ಯಾ ಇಲೆವೆನ್ ಹಾಗೂ ವಿಶ್ವ ಇಲೆವೆನ್ ನಡುವೆ ಎರಡು ಟಿ-20 ಪಂದ್ಯವನ್ನು ಆಯೋಜಿಸಲು ಐಸಿಸಿಯಿಂದ ಮಾನ್ಯತೆ ಪಡೆದುಕೊಂಡಿದೆ. ಆದರೆ ಭಾರತದಲ್ಲಿ ನಡೆಯುವ ಈ ಪಂದ್ಯಕ್ಕೆ ಪಾಕಿಸ್ತಾನದ ಯಾವುದೇ ಆಟಗಾರರನ್ನು ಆಹ್ವಾನಿಸಿಲ್ಲ ಎಂದು ತಿಳಿದುಬಂದಿದೆ.
ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಬಂಧ ಉತ್ತಮವಾಗಿಲ್ಲದಿರುವುದರಿಂದ ನಮ್ಮ ಆಟಗಾರರು ಪಾಕಿಸ್ತಾನಕ್ಕೂ, ಪಾಕಿಸ್ತಾನದ ಆಟಗಾರರು ಭಾರತಕ್ಕೂ ಆಗಮಿಸುವುದು ಅಸಾಧ್ಯವಾಗಿದೆ. ಅಲ್ಲದೆ ಪಾಕಿಸ್ತಾನದ ಆಟಗಾರರನ್ನು ಏಷ್ಯಾ ಇಲೆವೆನ್ ತಂಡದ ಪರ ಆಡಲು ಆಹ್ವಾನ ನೀಡಿಲ್ಲವಾದ್ರಿಂದ ಒಟ್ಟಿಗೆ ಆಡುವ ಸನ್ನಿವೇಶವೇ ಇಲ್ಲ ಎಂದು ಐಎನ್ಎಸ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಬಿಸಿಸಿಐನ ಜಂಟಿ ಕಾರ್ಯದರ್ಶಿ ಜಯೇಶ್ ಜಾರ್ಜ್ ತಿಳಿಸಿದ್ದರು.
ಇನ್ನು ಏಷ್ಯಾ ಇಲೆವೆನ್ ತಂಡಕ್ಕೆ ಭಾರತದ ಆಟಗಾರರನ್ನು ಗಂಗೂಲಿ ಆಯ್ಕೆ ಮಾಡಲಿದ್ದಾರೆ ಎಂದು ಜಾರ್ಜ್ ತಿಳಿಸಿದ್ದಾರೆ. ಧೋನಿ, ಬುಮ್ರಾ, ಹಾರ್ದಿಕ್ ಪಾಂಡ್ಯ ಸೇರಿದಂತೆ 5ರಿಂದ 7 ಆಟಗಾರರು ಈ ಪಂದ್ಯಗಳಲ್ಲಿ ಆಡುವ ಸಾಧ್ಯತೆ ಇದೆ.