ಕರಾಚಿ(ಪಾಕಿಸ್ತಾನ): ವಿಶ್ವ ಕ್ರಿಕೆಟ್ನ ರನ್ ಮಷಿನ್ ಎಂದೇ ಖ್ಯಾತಿಯಾಗಿರುವ ವಿರಾಟ್ ಕೊಹ್ಲಿ ಜೊತೆಗೆ ನನ್ನನ್ನು ಹೋಲಿಕೆ ಮಾಡಬೇಡಿ ಎಂದು ಮತ್ತೊಮ್ಮೆ ಪಾಕಿಸ್ತಾನದ ಕ್ರಿಕೆಟರ್ ಬಾಬರ್ ಅಜಮ್ ಮನವಿ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಈಗಾಗಲೇ ಭಾರತದಲ್ಲಿ ಲೆಜೆಂಡ್ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. ಎಲ್ಲಾ ವಿಭಾಗದ ಕ್ರಿಕೆಟ್ನಲ್ಲೂ ಹಲವು ಮೈಲಿಗಲ್ಲು ತಲುಪಿದ್ದಾರೆ. ಅವರು ತಲುಪಿರುವ ಸ್ಥಾನಕ್ಕೆ ತಲುಪಬೇಕೆಂದುಕೊಂಡಿದ್ದೇನೆ. ಆದ್ರೆ ನನ್ನನ್ನು ಈಗ ಅವರೊಂದಿಗೆ ಹೋಲಿಕೆ ಮಾಡುವ ಅಗತ್ಯವಿಲ್ಲ ಎಂದು ಅಜಂ ತಿಳಿಸಿದ್ದಾರೆ.
'ಮಾಧ್ಯಮ ಹಾಗೂ ಅಭಿಮಾನಿಗಳು ನನ್ನ ಹಾಗೂ ಕೊಹ್ಲಿ ನಡುವೆ ಹೋಲಿಕೆ ಮಾಡುತ್ತಿದ್ದಾರೆ. ಕೊಹ್ಲಿ ಸ್ಮಿತ್ರಂತೆ ಇನ್ನು ರೆಡ್ ಬಾಲ್ ಕ್ರಿಕೆಟ್ನಲ್ಲಿ ನಾನು ಸಾಕಷ್ಟು ರನ್ ಗಳಿಸಬೇಕಿದೆ. ಇದೇ ಕಾರಣದಿಂದ ಟೆಸ್ಟ್ ಕ್ರಿಕೆಟ್ನಲ್ಲಿ ರನ್ ಗಳಿಸಲು ಹೆಚ್ಚಿನ ಗಮನ ನೀಡುತ್ತಿದ್ದೇನೆ ಎಂದಿದ್ದಾರೆ.
ನನ್ನನ್ನು ಕೊಹ್ಲಿ ಅಥವಾ ಸ್ಟಿವ್ ಸ್ಮಿತ್ಗೆ ಹೋಲಿಸುವುದರಿಂದ ನನ್ನ ಮೇಲೆ ಯಾವುದೇ ಒತ್ತಡ ಬೀರುವುದಿಲ್ಲ. ನಾನು ನನ್ನ ಹಿಂದಿನ ಬ್ಯಾಟಿಂಗ್ ವಿಡಿಯೋಗಳನ್ನು ನೋಡಿ ನನ್ನ ತಪ್ಪುಗಳನ್ನು ತಿದ್ದಿಕೊಳ್ಳುತ್ತಿದ್ದೇನೆ ಎಂದು ಬಾಬರ್ ಹೇಳಿದ್ದಾರೆ.
ಬಾಬರ್ ಅಜಮ್ ಪಾಕಿಸ್ತಾನದ ಪರ ಎಲ್ಲಾ ಕ್ರಿಕೆಟ್ ವಿಭಾಗದಲ್ಲೂ ಟಾಪ್ 10 ಐಸಿಸಿ ರ್ಯಾಂಕಿಂಗ್ನಲ್ಲಿರುವ ಏಕೈಕ ಕ್ರಿಕೆಟಿಗ. ಇವರು ಟಿ20ಯಲ್ಲಿ 50, ಏಕದಿನ ಕ್ರಿಕೆಟ್ನಲ್ಲಿ 54 ಸರಾಸರಿಯೊಂದಿಗೆ ರನ್ ಗಳಿಸಿದ್ದಾರೆ. ಆದರೆ ಟೆಸ್ಟ್‌ನಲ್ಲಿ ಮಾತ್ರ 39 ರ ಸರಾಸರಿ ಹೊಂದಿದ್ದಾರೆ. ಆದ್ದರಿಂದ ಅವರು ಕೊಹ್ಲಿಯ ಜೊತೆ ತನ್ನ ಹೋಲಿಕೆಯನ್ನು ಸದಾ ವಿರೋಧಿಸಿಕೊಂಡು ಬಂದಿದ್ದಾರೆ.
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಬಾಬರ್ ಅಜೇಯ 102 ರನ್ ಗಳಿಸಿದ್ದರು.