ನವದೆಹಲಿ: ಲಾಕ್‌ಡೌನ್ ಸಮಯದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಆದಾಯ ಗಳಿಸುವ ಕ್ರೀಡಾಪಟುಗಳ ಪಟ್ಟಿಯಲ್ಲಿ ಪೋರ್ಚುಗೀಸ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಅಗ್ರಸ್ಥಾನ ಪಡೆದುಕೊಂಡಿದ್ದು, ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕೂಡ ಟಾಪ್-10 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಆದಾಯ ಗಳಿಸುವ ಕ್ರೀಡಾಪಟುಗಳ ಟಾಪ್ -10 ಪಟ್ಟಿಯಲ್ಲಿ ಕಾಣಿಸಕೊಂಡ ಏಕೈಕ ಕ್ರಿಕೆಟ್ ಆಟಗಾರ ಎಂಬ ಕೀರ್ತಿಗೆ ವಿರಾಟ್ ಪಾತ್ರರಾಗಿದ್ದಾರೆ.
ಮಾರ್ಚ್ 12 ರಿಂದ ಮೇ 14 ರವರೆಗಿನ ಲಾಕ್‌ಡೌನ್ ಅವಧಿಯಲ್ಲಿ ಮ್ಯಾನೇಜ್‌ಮೆಂಟ್ ಕನ್ಸಲ್ಟಿಂಗ್ ಕಂಪನಿ ಕಲೆಹಾಕಿದ ಅಂಕಿ-ಅಂಶಗಳು ಆಧಾರದಲ್ಲಿ ವಿಶ್ವದಾದ್ಯಂತ ಅತ್ಯಂತ ಮಾನ್ಯತೆ ಪಡೆದ ಕ್ರೀಡಾಪಟುಗಳಲ್ಲಿ ಕೊಹ್ಲಿ ಗುರುತಿಸಿಕೊಂಡಿದ್ದಾರೆ.
ಲಾಕ್‌ಡೌನ್ ಅವಧಿಯಲ್ಲಿ ಕೊಹ್ಲಿ ಪ್ರಾಯೋಜಿತ ಪೋಸ್ಟ್‌ಗಳ ಮೂಲಕ 379,294 ಪೌಂಡ್ (3.6 ಕೋಟಿ) ಗಳಿಸಿದ್ದು, ಟಾಪ್-10 ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಈ ಸಮಯದಲ್ಲಿ ಕೊಹ್ಲಿ ಕೇವಲ ಮೂರು ಪೋಸ್ಟ್‌ಗಳನ್ನು ಶೇರ್ ಮಾಡಿದ್ದಾರೆ. ಪ್ರತಿ ಫೋಟೋಗೆ ವಿರಾಟ್ 126,431 ಪೌಂಡ್ ಪಡೆದುಕೊಂಡಿದ್ದಾರೆ.
ಪೋರ್ಚುಗೀಸ್ ಸೂಪರ್ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಪೋಸ್ಟರ್ಗಳ ಮೂಲಕ 1.8 ಮಿಲಿಯನ್ ಪೌಂಡ್(17.9 ಕೋಟಿ) ಗಳಿಕೆಯೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.