ನವದೆಹಲಿ: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ನಿರತವಾಗಿರುವ ಇಡೀ ವಿಶ್ವವೇ ಅನೇಕ ಮಹತ್ವದ ನಿರ್ಧಾರ ಕೈಗೊಂಡು ಜಾರಿಗೊಳಿಸಿದ್ದು, ಇದರ ಮಧ್ಯೆ ಅನೇಕ ಕ್ರೀಡಾಕೂಟಗಳು ಮುಂದೂಡಿಕೆಯಾಗಿವೆ. ಭಾರತದಲ್ಲಿ ನಡೆಯುವ ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಕೂಡ ಮುಂದೂಡಿಕೆಯಾಗಿದೆ.
ಎಲ್ಲವೂ ಸರಿಯಾಗಿದ್ದಿದ್ದರೆ ಇದೇ ತಿಂಗಳ 29ರಿಂದ 13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಗೊಳ್ಳಬೇಕಾಗಿತ್ತು. ಆದರೆ ಕೊರೊನಾ ವೈರಸ್ನಿಂದಾಗಿ ಟೂರ್ನಿ ಮುಂದೂಡಿಕೆಯಾಗಿದೆ. ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಮೂಲಗಳಿಂದ ಖಚಿತ ಮಾಹಿತಿ ಹೊರಬಿದ್ದಿದೆ.
ಐಸಿಸಿ ಟಿ-20 ವಿಶ್ವಕಪ್ ಟೂರ್ನಿ ಒಂದು ವೇಳೆ ಮುಂದೂಡಿಕೆಯಾದರೆ ಇದೇ ವರ್ಷ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಐಪಿಎಲ್ ಟೂರ್ನಿ ನಡೆಸಲು ನಿರ್ಧರಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ. ಇದೇ ವರ್ಷ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ವಿಶ್ವಕಪ್ ಟೂರ್ನಿ ನಡೆಯಲಿದ್ದು, ಅದು ಮುಂದೂಡಿಕೆಯಾದರೆ ಐಪಿಎಲ್ ನಡೆಸಬಹುದು ಎಂದು ತಿಳಿಸಿದೆ. ಈ ಸಲದ ಐಸಿಸಿ ಟಿ-20 ಪುರುಷರ ವಿಶ್ವಕಪ್ ಟೂರ್ನಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ.
ಟಿ-20 ವಿಶ್ವಕಪ್ ಮುಂದೂಡಿಕೆ ಅಸಾಧ್ಯ
ಇನ್ನು ಐಸಿಸಿ ಕ್ರಿಕೆಟ್ ಕೌನ್ಸಿಲ್, ಯಾವುದೇ ಕಾರಣಕ್ಕೂ ಕ್ರಿಕೆಟ್ ಟೂರ್ನಿ ಮುಂದೂಡಿಕೆ ಮಾಡುವುದಿಲ್ಲ ಎಂದಿದೆ. ಈಗಾಗಲೇ ಬೋರ್ಡ್ನ ಸದಸ್ಯರು ಸಭೆ ನಡೆಸಿದ್ದು, ಟೂರ್ನಿ ಮುಂದೂಡಿಕೆ ಮಾಡುವಂತೆ ಯಾರೂ ಕೇಳಿಕೊಂಡಿಲ್ಲ ಎಂದು ಐಸಿಸಿ ತಿಳಿಸಿದೆ. ಕೊರೊನಾ ವೈರಸ್ನಿಂದಾಗಿ ಈ ವರ್ಷ ನಡೆಯಬೇಕಾಗಿದ್ದ ಟೋಕಿಯೋ ಒಲಿಂಪಿಕ್ಸ್ ಕೂಡಾ ಮುಂದೂಡಿಕೆಯಾಗಿದೆ.