ಮುಂಬೈ: ಕೊರೊನಾ ಭೀತಿಯಿಂದ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದ್ದ ಟಿ-20ಯ ಶ್ರೀಮಂತ ಲೀಗ್ ಐಪಿಎಲ್ ಮುಂದಿನ ಸೆಪ್ಟೆಂಬರ್ ಮತ್ತು ನವೆಂಬರ್ನಲ್ಲಿ ನಡೆಯುವ ಸಾಧ್ಯತೆಯಿದೆ.
ಈ ಬಾರಿಯ ಐಪಿಎಲ್ ನಡೆಯದಿದ್ದರೆ ಸುಮಾರು 4000 ಕೋಟಿ ರೂ. ನಷ್ಟ ಉಂಟಾಗುತ್ತದೆ ಎಂದು ಬಿಸಿಸಿಐ ಅಧ್ಯಕ್ಷ ಗಂಗೂಲಿ ಈ ಹಿಂದೆ ಹೇಳಿಕೆ ನೀಡಿದ್ದರು. ಇದೀಗ ಆ ನಷ್ಟವನ್ನು ಹೇಗಾದರೂ ತುಂಬಿಸಿಕೊಳ್ಳಲು ಪ್ರಯತ್ನದಲ್ಲಿರುವ ಬಿಸಿಸಿಐ, ಐಪಿಎಲ್ ನಡೆಸೇ ತೀರುವ ಉಮೇದಿನಲ್ಲಿದೆ. ಮುಂದಿನ ಸೆಪ್ಟೆಂಬರ್ 25ರಿಂದ ನವೆಂಬರ್ 11ರವರೆಗೆ ನಡೆಸಲು ಮುಂದಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಆದರೆ ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದು ಸೋಂಕು ಪೀಡಿತರ ಸಂಖ್ಯೆ ಕಡಿಮೆಯಾಗಿ ಕೇಂದ್ರ ಸರ್ಕಾರ ಹಸಿರು ನಿಶಾನೆ ನೀಡಿದರೆ ಮಾತ್ರ ಐಪಿಎಲ್ ಸಾಧ್ಯ ಎನ್ನಲಾಗುತ್ತಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿರುವ ಐಪಿಎಲ್ ಫ್ರಾಂಚೈಸಿಯ ಅಧಿಕಾರಿಯೊಬ್ಬರು, "ಹೌದು, ನಾವು ಈ ದಿನಾಂಕವನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಿಕೊಳ್ಳಬೇಕಿದೆ. ಆದರೆ ಇದೆಲ್ಲಾ ದೇಶದಲ್ಲಿ ಸಾಂಕ್ರಾಮಿಕ ರೋಗ ಯಾವ ಸ್ಥಿತಿಯಲ್ಲಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಈಗಾಗಲೇ ಸರ್ಕಾರ ಪ್ರತಿದಿನ ಸೋಂಕಿನ ಪ್ರಕರಣಗಳ ಸಂಖ್ಯೆಯನ್ನು ಇಳಿಸಲು ಪ್ರಯತ್ನಿಸುತ್ತಿದೆ. ನಾವು ಕೂಡ ಅಪಾಯಕಾರಿ ಸೋಂಕಿನ ಪ್ರಕರಣ ಇಳಿಯುವುದನ್ನು ಎದುರು ನೋಡುತ್ತಿದ್ದೇವೆ" ಎಂದು ಹೇಳಿದ್ದಾರೆ.
ಇನ್ನು ಅಕ್ಟೋಬರ್ನಲ್ಲಿ ನಿಗದಿಯಾಗಿರುವ ಟಿ-20 ವಿಶ್ವಕಪ್ ನಡೆಯದಿದ್ದರೆ ಮಾತ್ರ ಐಪಿಎಲ್ಗೆ ಅನುಕೂಲವಾಗಲಿದೆ. ಆದರೆ ಆಸ್ಟ್ರೇಲಿಯಾದಲ್ಲೂ ಪರಿಸ್ಥಿತಿ ಸರಿಯಿಲ್ಲದಿರುವುದರಿಂದ ಕೇಂದ್ರ ಸರ್ಕಾರ ಪ್ರಯತ್ನ ಮಾಡಿದರೆ ಐಪಿಎಲ್ ಬಹುತೇಕ ನಡೆಯಲಿದೆ ಎನ್ನಲಾಗುತ್ತಿದೆ.