ವಿಶಾಖಪಟ್ಟಣ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ ಕೊನೆಯ ದಿನದಂದು ಭಾರತ ಗೆಲುವಿನತ್ತ ಹೆಜ್ಜೆಯಿಟ್ಟಿದೆ.
ಪಂದ್ಯದ ನಾಲ್ಕನೇ ದಿನದಂದು 395 ರನ್‌ಗಳ ಗುರಿ ಪಡೆದು ತನ್ನ ಎರಡನೇ ಇನಿಂಗ್ಸ್ ಆರಂಭಿಸಿದ್ದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ 11ರನ್ ಸೇರಿಸುವಷ್ಟರಲ್ಲಿ 1 ವಿಕೆಟ್ ಕಳೆದುಕೊಂಡಿತ್ತು.
ಇಂದು (ಭಾನುವಾರ) ದಿನದಾಟದ ಮೊದಲ ಅವಧಿಯಲ್ಲೇ ತೆಯೂನಿಸ್ ಡೆ ಬ್ರೂಯ್ನ್ (10), ತೆಂಬಾ ಬವೂಮಾ (0), ನಾಯಕ ಫಾಫ್ ಡು ಪ್ಲೆಸಿಸ್ (13), ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ'ಕಾಕ್ (0), ವೆರ್ನಾನ್ ಫಿಲ್ಯಾಂಡರ್ (0), ಕೇಶವ ಮಹಾರಾಜ್ (0) ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದೆ.
ಸಂಕಷ್ಟಕ್ಕೆ ಸಿಲುಕಿರುವ ದಕ್ಷಿಣ ಆಫ್ರಿಕಾ ತಂಡವು ತನ್ನ ಪ್ರಮುಖ 8 ವಿಕೆಟ್ ಕಳೆದುಕೊಂಡು 105 (38 ಓವರ್) ರನ್ಗಳಿಸಿದೆ. ಸೆನುರನ್ ಮುತ್ತುಸ್ವಾಮಿ (14) ಮತ್ತು ಡೇನ್ ಪೀಡ್ತ್ (25) ಬ್ಯಾಂಟಿಂಗ್ ನಡೆಸುತ್ತಿದ್ದಾರೆ.
ಡೆ'ಬ್ರೂಯ್ನ್ ಅವರನ್ನು ಬೌಲ್ಡ್ ಮಾಡುವ ಮೂಲಕ ಆರ್ ಅಶ್ವಿನ್ ಟೀಮ್ ಇಂಡಿಯಾಗೆ ದಿನದ ಮೊದಲ ಯಶಸ್ಸು ತಂದುಕೊಟ್ಟರೆ, ಬಳಿಕ ಪುಟಿದೇಳದೇ ಉಳಿಯುತ್ತಿದ್ದ ಪಿಚ್‌ನ ಸಂಪೂರ್ಣ ಲಾಭ ಪಡೆದ ಮೊಹಮ್ಮದ್ ಶಮಿ, ಬವೂಮಾ, ಫಾಫ್ ಡು'ಪ್ಲೆಸಿಸ್ ಮತ್ತು ಡಿ'ಕಾಕ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.
ತೆಂಬಾ ಬವೂಮಾ, ಕ್ವಿಂಟನ್ ಡಿ'ಕಾಕ್, ವೆರ್ನಾನ್ ಫಿಲ್ಯಾಂಡರ್ ಮತ್ತು ಕೇಶವ ಮಹಾರಾಜ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆರ್. ಅಶ್ವಿನ್ -1, ಮೊಹಮ್ಮದ್ ಶಮಿ-3 ಮತ್ತು ಜಡೇಜಾ- 4 ವಿಕೆಟ್ ಪಡೆದು ಮಿಂಚಿದರು.