ಲಂಡನ್: ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ನಿಂದ ಹೊರಗಿಟ್ಟಿದ್ದ ಸಂದರ್ಭದಲ್ಲಿ ಬ್ರಾಡ್ ನಿವೃತ್ತಿ ಬಗ್ಗೆ ಆಲೋಚನೆ ಮಾಡಿದ್ದಾರೆ ಎಂದು ಸಂದರ್ಶನದ ವೇಳೆ ಬಹಿರಂಗ ಪಡಿಸಿದ್ದಾರೆ.
ಸೌತಾಂಪ್ಟನ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ರಾಡ್ ಅವರನ್ನು ತಂಡದಿಂದ ಹೊರಗಿಟ್ಟಿದ್ದು, ದೊಡ್ಡ ಸುದ್ದಿಯಾಗಿತ್ತು. ಆ ಪಂದ್ಯದಲ್ಲಿ ಆ್ಯಂಡರ್ಸನ್ ಜೋಫ್ರಾ ಆರ್ಚರ್ ಮತ್ತು ಮಾರ್ಕ್ ವುಡ್ ಅವರನ್ನು ಆಡಿಸಲಾಗಿತ್ತು. ಈ ಪಂದ್ಯದಲ್ಲಿ ಇಂಗ್ಲೆಂಡ್ ಸೋಲುಕಂಡ ನಂತರ ಹಲವಾರು ದಿಗ್ಗಜ ಕ್ರಿಕೆಟಿಗರು ಇಂಗ್ಲೆಂಡ್ ಆಡಳಿತ ಮಂಡಳಿ ವಿರುದ್ಧ ಕಿಡಿಕಾರಿದ್ದರು.
"ಮೊದಲ ಪಂದ್ಯದಲ್ಲಿ ನೀವು ಆಡುತ್ತಿಲ್ಲ ಎಂದು ನಾಯಕ ಬೆನ್ ಸ್ಟೋಕ್ಸ್ ಬಂದು ನನಗೆ ಹೇಳಿದಾಗ ನಾನು ಕುಸಿದಿದ್ದೆ. ನನ್ನ ದೇಹವೆಲ್ಲಾ ನಡುಗಲಾರಂಭಿಸಿತ್ತು. ನನಗೆ ಏನು ಮಾತನಾಡಬೇಕೆಂದು ಗೊತ್ತಾಗಲಿಲ್ಲ" ಎಂದು ಹೇಳಿದ್ದಾರೆ.
"ನಾನು ಆ ಪಂದ್ಯದಲ್ಲಿ ಆಡುತ್ತೇನೆಂದು ನಿರೀಕ್ಷಿಸಿದ್ದೆ, ನಾನು ಆಡಲು ಅರ್ಹನಾಗಿದ್ದೇನೆ ಎಂದು ಭಾವಿಸಿದ್ದೆ, ಆದರೆ ನಾನು ಆ ಪಂದ್ಯದಲ್ಲಿ ಆಡುತ್ತಿಲ್ಲ ಎಂದಾಗ ನನ್ನ ತಲೆಯಲ್ಲಿ ನಿವೃತ್ತಿಯ ಆಲೋಚನೆ ಬಂದಿತ್ತು" ಎಂದು ಅವರು ತಿಳಿಸಿದ್ದಾರೆ.
"ನಾನು ಈ ವಿಚಾರವನ್ನು ಯಾರಿಗೂ ಹೇಳಿಲ್ಲ. ಮೊದಲ ಟೆಸ್ಟ್ ನಡೆದಿದ್ದ ವೇಳೆ ನಾನು ತೀವ್ರ ಒತ್ತಡಕ್ಕೆ ಒಳಗಾಗಿದ್ದೆ. ಬಯೋ ಸೆಕ್ಯೂರ್ ವಾತಾವರಣದಲ್ಲಿ ನಾವಿದ್ದಿದ್ದರಿಂದ ಹೊರಗಡೆ ಎಲ್ಲೂ ಸುತ್ತಾಡುವುದಕ್ಕೆ ಅನುಮತಿಯಿರಲಿಲ್ಲ. ಹೋಟೆಲ್ನ ಕೊಠಡಿಯಲ್ಲಿ ನಾನು ಏಕಾಂಗಿಯಾಗಿ ಸಿಲುಕಿಕೊಂಡಿದ್ದೆ. ಈ ಸಂದರ್ಭದಲ್ಲಿ ನನ್ನ ಗೆಳತಿ ಮೊಲ್ಲಿಯನ್ನು ಭೇಟಿ ಮಾಡಲು ಹಿಂತಿರುಗಬೇಕೆಂದರೂ ಸಾಧ್ಯವಾಗಿರಲಿಲ್ಲ ಎಂದು ತಾವು ಎದರುಸಿದ್ದ ಸಂಕಷ್ಟವನ್ನು ತೋಡಿಕೊಂಡಿದ್ದಾರೆ.
" ಎರಡು ದಿನ ನಿದ್ದೆಯನ್ನು ಮಾಡಲಾಗಲಿಲ್ಲ, ಈ ಸಂದರ್ಭದಲ್ಲಿ ನನ್ನ ತಲೆಯಲ್ಲಿ ವಿಭಿನ್ನ ಆಲೋಚನೆಗಳು ಬರಲಾರಂಭಿಸಿದವು. ಕ್ರಿಕೆಟ್ಗೆ ನಿವೃತ್ತಿ ಹೇಳಬೇಕು ಎಂದು ನಿರ್ಧರಿಸಿದ್ದೆ . ಆದರೆ, ಸ್ಟೋಕ್ಸ್ ನನ್ನ ರೂಮಿನ ಬಾಗಿಲು ತಟ್ಟಿ, ಕಾರಿಡಾರ್ನಲ್ಲಿ ನಿಂತು ಕೆಲವು ಸಮಯ ಮಾತನಾಡಿದರು. 'ಇದು ಕ್ರಿಕೆಟ್ ಬಗ್ಗೆ ಅಲ್ಲ, ನೀನು ಹೇಗಿದ್ದೀಯ ಗೆಳೆಯ' ಎಂದು ಕೇಳಿದ್ದರು. ಅದು ನನ್ನನ್ನು ಹೆಚ್ಚು ಆಕರ್ಷಿಸಿತು. ನನ್ನ ಮನಸ್ಸು ಕೂಡ ಹಗುರವಾಯಿತು. ಇನ್ನು ನನ್ನ ಸುತ್ತ ನೆಟ್ವರ್ಕ್ ಸಮಸ್ಯೆ ಇಲ್ಲದಿದ್ದರಿಂದ ನಾನು ನನ್ನ ತಂದೆ-ತಾಯಿ, ಸ್ನೇಹಿತರು ಹಾಗೂ ಅಕ್ಕ ತಂಗಿಯರ ಜೊತೆ ಸಾಕಷ್ಟು ಮಾತನಾಡಿದೆ. ಇದು ಕೂಡ ನನಗೆ ದುಡುಕಿನ ನಿರ್ಧಾರದಿಂದ ಹೊರಬರುವಂತೆ ಮಾಡಿತು" ಎಂದು ಹೇಳಿಕೊಂಡಿದ್ದಾರೆ.
ಆದರೆ, ದ್ವಿತೀಯ ಟೆಸ್ಟ್‌ನಲ್ಲಿ ಅವಕಾಶ ಪಡೆದ ಬ್ರಾಡ್ 6 ವಿಕೆಟ್ ಪಡೆದರು. ನಂತರ ಮೂರನೇ ಟೆಸ್ಟ್‌ನಲ್ಲಿ 10 ವಿಕೆಟ್ ಪಡೆದರು ಟೆಸ್ಟ್‌ನಲ್ಲಿ 500 ವಿಕೆಟ್‌ಗಳ ಸಾಧನೆ ಮಾಡಿದರು. ಸರಣಿ ಶ್ರೇಷ್ಠ ಗೌರವಕ್ಕೂ ಪಾತ್ರರಾದರು.