ಮುಂಬೈ: ಗುರುವಾರ ನಡೆಯುವ ಮಿನಿ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ, ನಾಯಕ ವಿರಾಟ್ ಕೊಹ್ಲಿ ಮತ್ತು ವಿಲಿಯರ್ಸ್ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್‌ವೆಲ್ ಅವರಂತಹ ಆಟಗಾರನನ್ನು ಖರೀದಿಸಲು ಮುಂದಾಗಬಹುದು ಎಂದು ಟೀಮ್ ಇಂಡಿಯಾ ಮಾಜಿ ಓಪನರ್ ಗೌತಮ್ ಗಂಭೀರ್ ಹೇಳಿದ್ದಾರೆ.
ಟಿ-20 ಕ್ರಿಕೆಟ್‌ನಲ್ಲಿ ದೊಡ್ಡ ಹೊಡೆತಕ್ಕೆ ಹೆಸರುವಾಸಿಯಾದ ಮ್ಯಾಕ್ಸ್‌ವೆಲ್, ಗುರುವಾರ ನಡೆಯಲಿರುವ ಐಪಿಎಲ್ ಹರಾಜಿನಲ್ಲಿನ 292 ಆಟಗಾರರಲ್ಲಿ ಪ್ರಮುಖ ಆಕರ್ಷಣೆಯಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಜೊತೆಗೆ ಉತ್ತಮ ಸ್ಪಿನ್ ಬೌಲಿಂಗ್ ಮಾಡಬಲ್ಲ ಮ್ಯಾಕ್ಸ್ವೆಲ್ರಂತಹ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಲು ಆರ್ಸಿಬಿ ಮುಂದಾಗಬಹುದು ಎಂದು ಗಂಭೀರ್ ಹೇಳಿದ್ದಾರೆ.
ಎಬಿಡಿ ಅವರಂತಹ ಆಟಗಾರ ತಂಡದಲ್ಲಿರುವಾಗ ಕೊಹ್ಲಿ ತಮ್ಮ ತಂಡದ ದೇವದತ್ ಪಡಿಕ್ಕಲ್ ಅವರ ಜೊತೆಗೆ ಆರಂಭಿಕನಾಗಿ ಕಣಕ್ಕಿಳಿಯುವುದು ಅವರಿಗೆ ಸೂಕ್ತವಾದ ಜಾಗ. ನಂತರ ತಂಡಕ್ಕೆ ಮ್ಯಾಕ್ಸ್ವೆಲ್ನಂತಹ ಒಬ್ಬ ಪ್ರಮುಖ ಆಟಗಾರ ಬೇಕು. ಏಕೆಂದರೆ ಚಿನ್ನಸ್ವಾಮಿ ಕ್ರೀಡಾಂಗಣ ಫ್ಲಾಟ್ ಮತ್ತು ಚಿಕ್ಕದಾಗಿದೆ. ಆದ್ದರಿಂದ ಅವರು(ಮ್ಯಾಕ್ಸ್‌ವೆಲ್) ಹೆಚ್ಚು ಪರಿಣಾಮ ಬೀರುತ್ತಾರೆ. ಹಾಗಾಗಿ ಆರ್ಸಿಬಿ ಬಹುಶಃ ಮ್ಯಾಕ್ಸ್ವೆಲ್ನಂತಹ ಆಟಗಾರರನನ್ನು ಎದುರು ನೋಡುತ್ತದೆ ಎಂದು ಗಂಭೀರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅದೇ ರೀತಿ ಉಮೇಶ್ ಯಾದವ್ ಮತ್ತು ಮೋಯಿನ್ ಅಲಿಯನ್ನು ಕೈಬಿಟ್ಟಿರುವುದು ತಮಗೆ ಆಶ್ಚರ್ಯ ತಂದಿದೆ ಎಂದು ಹೇಳಿರುವ ಅವರು, ಪಂಜಾಬ್ ಕಿಂಗ್ಸ್ ತಂಡ ಉಮೇಶ್ ಯಾದವ್ ಅವರನ್ನು ಖರೀದಿಸಬಹುದು ಎಂದಿದ್ದಾರೆ. ಉಮೇಶ್ ಯಾದವ್ ಭಾರತೀಯ ಬೌಲಿಂಗ್ ವಿಭಾಗಕ್ಕೆ ಬಲ ತರಲಿದ್ದಾರೆ. ಜೊತೆಗೆ ಕ್ರಿಸ್ ಮೋರಿಸ್ ಮತ್ತು ಕೈಲ್ ಜಮೀಸನ್ ಅವರನ್ನು ಕೂಡ ಪಂಜಾಬ್ ತಂಡ ಖರೀದಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ವಿಶ್ವದಾದ್ಯಂತ ಅಭಿಮಾನಿಗಳ ಮನಗೆದ್ದ ಅಜಾತ ಶತ್ರು ಎಬಿಡಿ ವಿಲಿಯರ್ಸ್ಗೆ ಜನ್ಮದಿನದ ಸಂಭ್ರಮ