ಪರ್ತ್ (ಆಸ್ಟ್ರೇಲಿಯಾ): ವಿಶ್ವಕಪ್ನ ಮೊದಲ ಪಂದ್ಯ ಸೋತಿರುವ ಆತಿಥೇಯ ಆಸ್ಟ್ರೇಲಿಯಾಗೆ ಮತ್ತೊಂದು ತಲೆನೋವು ಎದುರಾಗಿದೆ. ತಂಡದ ಪ್ರಮುಖ ಸ್ಪಿನ್ ಅಸ್ತ್ರ ಆ್ಯಡಂ ಜಂಪಾಗೆ ಕೊರೊನಾ ದೃಢಪಟ್ಟಿದೆ. ಶ್ರೀಲಂಕಾ ವಿರುದ್ಧದ ಪಂದ್ಯದಿಂದ ಅವರನ್ನು ಕೈಬಿಡಲಾಗಿದೆ. ಇನ್ನೊಬ್ಬ ಸ್ಪಿನ್ನರ್ ಆಸ್ಟನ್ ಅಗರ್ರಗೆ ಸ್ಥಾನ ನೀಡಲಾಗಿದೆ.
ಆಸ್ಟ್ರೇಲಿಯಾ ಸ್ಪಿನ್ನರ್ ಸಣ್ಣ ಜ್ವರದಿಂದ ಬಳಲುತ್ತಿದ್ದರು ಈ ವೇಳೆ ತಪಾಸಣೆ ನಡೆಸಿದಾಗ ಕೊರೊನಾ ಇರುವುದು ಗೊತ್ತಾಗಿದೆ. ಆದಾಗ್ಯೂ ಜಂಪಾಗೆ ಹೆಚ್ಚಿನ ರೋಗಲಕ್ಷಣಗಳು ಇಲ್ಲ. ಆರೋಗ್ಯವಾಗಿದ್ದಾರೆ ಎಂದು ತಂಡ ತಿಳಿಸಿದೆ.
ಪರ್ತ್ ಕ್ರೀಡಾಂಗಣದಲ್ಲಿ ನಡೆಯುವ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ ಅವರು ಲಭ್ಯವಿರಲಿದ್ದಾರೆ ಎಂದು ತಂಡದ ಆಡಳಿತ ಮಂಡಳಿ ತಿಳಿಸಿತ್ತು. ಬಳಿಕ ತಂಡ ಘೋಷಣೆಯಲ್ಲಿ ಜಂಪಾರನ್ನು ಕೈಬಿಡಲಾಗಿದೆ.
ಆಟಕ್ಕೆ ಕೊರೊನಾ ಅಡ್ಡಿಯಿಲ್ಲ: ವಿಶ್ವಕಪ್ ಆರಂಭಕ್ಕೂ ಮುನ್ನವೇ ಕೊರೊನಾ ನಿಯಮಕ್ಕೆ ತಿದ್ದುಪಡಿ ಮಾಡಲಾಗಿತ್ತು. ಯಾವುದೇ ತಂಡದ ಆಟಗಾರ ಅಲ್ಪ ರೋಗಲಕ್ಷಣ ಹೊಂದಿದ್ದರೆ ಪಂದ್ಯವಾಡಲು ಐಸಿಸಿ ಅನುಮತಿ ನೀಡಿದೆ. ಹೊಬಾರ್ಟ್ನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಐರ್ಲೆಂಡ್ನ ಜಾರ್ಜ್ ಡೊಕ್ರೆಲ್ ಕೊರೊನಾ ಮಧ್ಯೆಯೂ ಪಂದ್ಯವಾಡಿದ್ದರು.
ಈ ಬಾರಿಯ ವಿಶ್ವಕಪ್ ಆತಿಥ್ಯ ವಹಿಸಿರುವ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮೊದಲ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ 89 ರನ್‌ಗಳೊಂದಿಗೆ ಸೋಲು ಕಂಡಿತ್ತು. ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿಯೇ ಅತಿ ಹೆಚ್ಚುಗಳ ರನ್‌ಗಳ ಸೋಲಾಗಿದೆ.
ಓದಿ: 'ಇನ್ನು ಸಾಕು, ವಿಶ್ವಕಪ್ ನಿಲ್ಲಿಸಿ ಬಿಡಿ': ಪಾಕ್-ಭಾರತ ಪಂದ್ಯಕ್ಕೆ ಆಸ್ಟ್ರೇಲಿಯಾ ಕ್ರಿಕೆಟಿಗನ ಕಮೆಂಟ್