ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಶೋ ಮಜಾ ಭಾರತ ಕನ್ನಡ ಕಿರುತೆರೆಯ ನೆಚ್ಚಿನ ಕಾಮಿಡಿ ಶೋ ಎಂದರೆ ತಪ್ಪಿಲ್ಲ. ನವಿರಾದ ಹಾಸ್ಯದ ಮೂಲಕ ವಾರಾಂತ್ಯದಲ್ಲಿ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿದ್ದ ಮಜಾಭಾರತ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತಿದ್ದು, ಏಪ್ರಿಲ್ 11ರಂದು ಮಜಾಭಾರತ ಶೋನ ಫೈನಲ್ ಎಪಿಸೋಡ್ ಪ್ರಸಾರವಾಗಲಿದೆ.
ಮಜಾಭಾರತ ಗ್ರ್ಯಾಂಡ್ ಫಿನಾಲೆಯಲ್ಲಿ ಹಿರಿಯ ನಟ ದೊಡ್ಡಣ್ಣ ಮುಖ್ಯ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಫೈನಲ್ ಎಪಿಸೋಡ್ನ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಪ್ರೋಮೋ ಹಾಗೂ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದರ ಜೊತೆಗೆ ಚಾನೆಲ್ ಕೂಡಾ ಹೊಸ ಪ್ರೊಮೋವನ್ನು ಪ್ರಸಾರ ಮಾಡಿದ್ದು, ಇದು ವೀಕ್ಷಕರ ಮನ ಸೆಳೆದಿದೆ.

ಸ್ಪರ್ಧಿಗಳು ಕೊನೆಯ ಬಾರಿಗೆ ತಮ್ಮ ಆ್ಯಕ್ಟ್ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಇತ್ತೀಚೆಗೆ ಕಲರ್ಸ್ ಕನ್ನಡ ವಾಹಿನಿಯ ಧಾರಾವಾಹಿ ಕಲಾವಿದರು ಈ ಶೋನಲ್ಲಿ ಭಾಗವಹಿಸಿ ತಾವು ಎಂಜಾಯ್ ಮಾಡಿ, ವೀಕ್ಷಕರಿಗೂ ಮನರಂಜನೆ ನೀಡಿದ್ದರು. ಮಜಾ ಭಾರತ ಯುವ ಹಾಸ್ಯಗಾರರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ನೀಡುವ ವೇದಿಕೆಯಾಗಿದೆ. ಕರ್ನಾಟಕದ ಹಲವು ಭಾಗಗಳಲ್ಲಿರುವ ಯುವ ಹಾಸ್ಯಗಾರರು ಈ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿ ಕನ್ನಡಿಗರ ಮನ ಗೆದ್ದಿದ್ದಾರೆ.

ಮಜಾ ಭಾರತದ ಹೊಸ ಸೀಸನ್ ಕಳೆದ ವರ್ಷ ಆರಂಭವಾಗಿದ್ದು, ಕಿರುತೆರೆ ನಟಿ ಭೂಮಿ ಶೆಟ್ಟಿ ನಿರೂಪಕಿಯಾಗಿ ಮೋಡಿ ಮಾಡಿದ್ದರು. ಮುಂದೆ ಅವರು ಕಾರಣಾಂತರಗಳಿಂದ ಶೋನಿಂದ ಹೊರಬಂದಿದ್ದು, ಇದೀಗ ಆರ್ಜೆ ಸಿಂಧೂ ನಿರೂಪಣೆ ಮಾಡುತ್ತಿದ್ದಾರೆ. ಗುರುಕಿರಣ್ ಹಾಗೂ ರಚಿತಾರಾಮ್ ಈ ಕಾರ್ಯಕ್ರಮದ ತೀರ್ಪುಗಾರರಾಗಿದ್ದಾರೆ.