ವಿಜಯಲಕ್ಷ್ಮಿ ಸಿಂಗ್ ನಿರ್ದೇಶನದ 'ಯಾನ' ಚಿತ್ರದ ಟ್ರೇಲರನ್ನು ನಿನ್ನೆ ರಾಕಿಂಗ್ ಸ್ಟಾರ್ ಯಶ್ ಲಾಂಚ್ ಮಾಡಿದ್ದಾರೆ. ನಗರದ ಕಲಾವಿದರ ಸಂಘದಲ್ಲಿ ನಡೆದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಯಶ್ ಚಿತ್ರತಂಡಕ್ಕೆ ಶುಭ ಕೋರಿದರು.
ಚಿತ್ರದ ಟ್ರೇಲರ್ ನೋಡಿ ಮೆಚ್ಚಿದ ರಾಕಿ ಭಾಯ್ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. 'ಯಾನ' ಚಿತ್ರದ ಟ್ರೇಲರ್ ನೋಡುತ್ತಿದ್ದರೆ ನನ್ನ 'ಮೊಗ್ಗಿನ ಮನಸ್ಸು' ಚಿತ್ರ ನೆನಪಾಗುತ್ತಿದೆ. ಈ ಚಿತ್ರದಲ್ಲಿ ಒಂದು ಹೊಸತನವಿದೆ ಎಂದು ಚಿತ್ರದ ಟ್ರೇಲರ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು ಯಶ್. ಸಿನಿಮಾ ಲಾಂಚ್ ಆಗಿ 2-3 ವರ್ಷಗಳೇ ಕಳೆದಿದ್ದವು. ಇದೀಗ 'ಯಾನ' ತನ್ನ ಎಲ್ಲಾ ಪ್ರಯೋಗಗಳನ್ನು ಮುಗಿಸಿ ಕೊನೆಗೂ ಚಂದನವನಕ್ಕೆ ಕಾಲಿಟ್ಟಿದೆ. ಚಿತ್ರದಲ್ಲಿ ವಿಜಯಲಕ್ಷ್ಮಿ ಸಿಂಗ್ ಹಾಗೂ ಜೈ ಜಗದೀಶ್ ಅವರ ಮೂವರು ಪುತ್ರಿಯರಾದ ವೈಭವಿ, ವೈಸಿರಿ, ವೈನಿಧಿ ಜೊತೆಯಾಗಿ ನಟಿಸಿದ್ದಾರೆ.
'ಯಾನ' ಸಿನಿಮಾ ಜರ್ನಿಗೆ ಸಂಬಂಧಪಟ್ಟ ಸಿನಿಮಾವಾಗಿದ್ದು, ಪ್ರವಾಸದ ಅನುಭವವನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಮೂವರು ನಾಯಕಿಯರ ಸಂಗಮದ ಈ ಜರ್ನಿ ತುಂಬಾ ಕುತೂಹಲ ಕೆರಳಿಸಿದೆ. ಜೊತೆಗೆ ಅದ್ಭುತ ಕ್ಲೈಮ್ಯಾಕ್ಸ್ ಹೊಂದಿದ್ದು, ಕರ್ನಾಟಕದ ಸುಂದರ ತಾಣಗಳಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಅನಂತ್ನಾಗ್, ಸುಹಾಸಿನಿ, ಸಾಧುಕೋಕಿಲ, ಚಿಕ್ಕಣ್ಣ, ರಂಗಾಯಣ ರಘು ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ಬೋರ್ಡಿನಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು, ಜುಲೈ 12 ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.