ನಟ ಉಪೇಂದ್ರ ಇಂದು ಅಭಿಮಾನಿಗಳೊಂದಿಗೆ ತಮ್ಮ 51ನೇ ಹುಟ್ಟುಹಬ್ಬ ಆಚರಿಸಿಕೊಂಡರು. ದೂರದೂರುಗಳಿಂದ ಸಾವಿರಾರು ಅಭಿಮಾನಿಗಳು ಉಪೇಂದ್ರ ಅವರನ್ನು ನೋಡಲು ಬಂದಿದ್ದರು. ಮೆಚ್ಚಿನ ನಟನನ್ನು ಕಣ್ತುಂಬಿಸಿಕೊಂಡು ತಾವು ತಂದ ಉಡುಗೊರೆಗಳನ್ನು ನೀಡಿ ಶುಭ ಕೋರಿ ಹೋಗಿದ್ದಾರೆ.
ತುಮಕೂರಿನ ಮಧುಗಿರಿಯ ಅಭಿಮಾನಿಯೊಬ್ಬ ಸಾರ್ವಜನಿಕರಿಗೆ ಹಿರೇಕಾಯಿ ನಾರುಗಳನ್ನು ನೀಡುವ ಮೂಲಕ, ಪರಿಸರ ಕಾಳಜಿ ತೋರಿಸಿ ವಿಭಿನ್ನವಾಗಿ ಉಪ್ಪಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಮಧುಗಿರಿಯ ಶಿವಣ್ಣ ಎಂಬ ಉಪೇಂದ್ರಅವರ ಕಟ್ಟಾ ಅಭಿಮಾನಿ. ಕಳೆದ ನಾಲ್ಕೈದು ವರ್ಷಗಳಿಂದಲೂ ಉಪೇಂದ್ರ ಅವರ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಂಡು ಬಂದಿದ್ದಾರೆ. ಈ ವರ್ಷ ಕೂಡಾ ಬಹಳ ವಿಶೇಷವಾಗಿ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಮೈ ಉಜ್ಜಲು ಉಪಯೋಗವಾಗುವಂತೆ ಹಿರೇಕಾಯಿ ನಾರುಗಳನ್ನು ಸಾರ್ವಜನಿಕರಿಗೆ ವಿತರಿಸಿದ್ದಾರೆ. ಪರಿಸರ ಕಾಳಜಿ ತೋರಿಸಿ ಎಂದು ಎಲ್ಲರಲ್ಲೂ ಮನವಿ ಮಾಡಿದ್ದಾರೆ.
ವೃತ್ತಿಯಲ್ಲಿ ರೈತರಾಗಿರುವ ಮಧುಗಿರಿ ಶಿವಣ್ಣ ಸುಮಾರು 2000 ಹಿರೇಕಾಯಿ ನಾರುಗಳನ್ನು ಒಂದು ವರ್ಷದಿಂದ ಸಂಗ್ರಹಿಸಿ ಅವುಗಳನ್ನು ಇಂದು ಉಪೇಂದ್ರ ನಿವಾಸದ ಬಳಿ ಸಾರ್ವಜನಿಕರಿಗೆ ವಿತರಿಸಿದ್ದಾರೆ. ವಿಶೇಷ ಅಂದರೆ ಮಧುಗಿರಿ ಶಿವಣ್ಣ ಪ್ರತಿ ವರ್ಷವೂ ಇದೇ ರೀತಿ ಏನಾದರೂ ಹೊಸತನದಲ್ಲಿ ಉಪೇಂದ್ರ ಆಚರಿಸುತ್ತಾರೆ. ಕಳೆದ ವರ್ಷ ದಾಳಿಂಬೆ ಬೆಳೆದಿದ್ದ ಶಿವಣ್ಣ ಬುದ್ಧಿವಂತನ ಹುಟ್ಟುಹಬ್ಬದಂದು ದಾಳಿಂಬೆ ಕಾಳುಗಳನ್ನು ಅಭಿಮಾನಿಗಳಿಗೆ ವಿತರಿಸಿದ್ದರು. 'ಅದಕ್ಕೂ ಮುನ್ನ ಅಕ್ಕಿ ಕಾಳುಗಳಲ್ಲಿ ಉಪೇಂದ್ರ ಅವರ ಪೇಂಟಿಂಗ್ ಮಾಡಿ ವಿತರಿಸಿದ್ದೆ. ಉಪೇಂದ್ರ ಅವರು ಪರಿಸರ ಕಾಳಜಿ ಹೊಂದಿರುವ ವ್ಯಕ್ತಿಯಾಗಿದ್ದು ನಾನು ಪರಿಸರ ಸ್ನೇಹಿ ಹಿರೇಕಾಯಿ ನಾರುಗಳನ್ನು ಜನರಿಗೆ ನೀಡಿದ್ದೇನೆ ಎಂದು ತಿಳಿಸಿದರು. ಅಲ್ಲದೆ ಶಿವಣ್ಣ ಹೀರೆಕಾಯಿ ನಾರುಗಳಿಂದ 'ವಿಶ್ ಯು ಹ್ಯಾಪಿ ಬರ್ತಡೇ ರಿಯಲ್ ಸ್ಟಾರ್' ಎಂದು ಬರೆದು ಅದನ್ನು ತಂದು ಉಪೇಂದ್ರ ಮನೆ ಮುಂದೆ ಹಾಕಿದ್ದರು. ಅಭಿಮಾನಿಯ ಪರಿಸರ ಕಾಳಜಿಗೆ ಉಪೇಂದ್ರ ಕೂಡಾ ಬೆನ್ನು ತಟ್ಟಿದ್ದಾರೆ.