ಮನರಂಜನೆ, ಸುದ್ದಿ ವಾಹಿನಿಗಳಲ್ಲಿ ಈಟಿವಿಗೆ ಪ್ರಮುಖ ಸ್ಥಾನವಿದೆ. 1995 ಆಗಸ್ಟ್ 27 ರಂದು ಆರಂಭವಾದ ಈಟಿವಿಗೆ ಇಂದು ರಜತ ಮಹೋತ್ಸವದ ಸಂಭ್ರಮ. 25 ವರ್ಷಗಳಾದರೂ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿದಿರುವ ಈಟಿವಿ 25ನೇ ಹುಟ್ಟುಹಬ್ಬಕ್ಕೆ ಟಾಲಿವುಡ್ ಸೇರಿದಂತೆ ಇತರ ಗಣ್ಯರು ಶುಭ ಕೋರಿದ್ದಾರೆ.
ಟಿವಿ ಕ್ಷೇತ್ರದಲ್ಲಿ ಒಂದು ಬದಲಾವಣೆ ತಂದು 24 ಗಂಟೆಯೂ ತಮ್ಮ ವಾಹಿನಿಯನ್ನು ಪ್ರೇಕ್ಷಕರು ನೋಡುವಂತೆ ಮಾಡಿದ ಕೀರ್ತಿ ಈನಾಡು ಸಂಸ್ಥೆ ಚೇರ್ಮನ್, ಶ್ರೀಯುತ ರಾಮೋಜಿ ರಾವ್ ಅವರಿಗೆ ಸಲ್ಲಬೇಕು. ಅವರು ನಮ್ಮೆಲ್ಲರಿಗೂ ಗುರು, ತಂದೆ ಸಮಾನರು. ಈಟಿವಿ ಇಷ್ಟು ಎತ್ತರಕ್ಕೆ ತಲುಪಲು ಅವರು ಪಟ್ಟ ಶ್ರಮವೇ ಕಾರಣ. ಈಟಿವಿ ಮತ್ತಷ್ಟು ಒಳ್ಳೆಯ ಕಾರ್ಯಕ್ರಮಗಳನ್ನು ನೀಡಿ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಮೆಗಾಸ್ಟಾರ್ ಚಿರಂಜೀವಿ ಶುಭ ಹಾರೈಸಿದ್ದಾರೆ.
25 ವರ್ಷಗಳನ್ನು ಪೂರೈಸಿರುವ ಈಟಿವಿಗೆ ಶುಭಾಶಯಗಳು. ಈ ಎರಡು ದಶಕಗಳಲ್ಲಿ ಈಟಿವಿ ಹಂತಹಂತವಾಗಿ ಬೆಳೆಯುತ್ತಿರುವುದನ್ನು ನೋಡಿದರೆ ಖುಷಿಯಾಗುತ್ತಿದೆ. ಶ್ರೀಯುತ ರಾಮೋಜಿ ರಾವ್ ಹಾಗೂ ತಂಡಕ್ಕೆ ನನ್ನ ಅಭಿನಂದನೆಗಳು ಎಂದು ಮಹೇಶ್ ಬಾಬು ಪ್ರತಿಕ್ರಿಯಿಸಿದ್ದಾರೆ.
1995-2020 ವರೆಗೆ ಈಟಿವಿ 25 ಸಂವತ್ಸರಗಳನ್ನು ಪೂರೈಸಿದೆ. ಈಟಿವಿ ಎಂದರೆ ಒಂದು ಸಂಚಲನ. 1995-96 ರಲ್ಲಿ ಈಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಪಾಡುತಾ ತೀಯಗಾ' ಕಾರ್ಯಕ್ರಮವನ್ನು ನಾನು ತಪ್ಪದೆ ನೋಡುತ್ತಿದ್ದೆ. ಇದು ನಾನು ಬಹಳ ಇಷ್ಟಪಟ್ಟು ನೋಡುತ್ತಿದ್ದ ಕಾರ್ಯಕ್ರಮ. ಮನರಂಜನಾ ಕಾರ್ಯಕ್ರಮ ಮಾತ್ರವಲ್ಲದೆ ಈಟಿವಿ ನ್ಯೂಸ್ ಎಂದರೆ ನನಗೆ ಇಷ್ಟ. ಅಂದಿನಿಂದ ಇಂದಿನವರೆಗೆ ಈಟಿವಿ ಅದೇ ಘನತೆ ಉಳಿಸಿಕೊಂಡು ಪ್ರಾಮಾಣಿಕ ಸುದ್ದಿಯನ್ನು ಎಲ್ಲರಿಗೂ ನೀಡುತ್ತಿದೆ ಎಂದು ಅಕ್ಕಿನೇನಿ ನಾಗಾರ್ಜುನ ಈಟಿವಿಯನ್ನು ಕೊಂಡಾಡಿದ್ದಾರೆ.
ಪವರ್ ಸ್ಟಾರ್ ಪವನ್ ಕಲ್ಯಾಣ್ ಮಾತನಾಡಿ, ದಕ್ಷಿಣ ಭಾರತದ ಮೊದಲ ಸ್ಯಾಟಲೈಟ್ ಚಾನೆಲ್ ಈಟಿವಿ 25 ಸಂವಂತ್ಸರಗಳನ್ನು ಪೂರೈಸಿದೆ. ನಂದಿ ಪ್ರಶಸ್ತಿ ಜೊತೆಗೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಈಟಿವಿ ತನ್ನದಾಗಿಸಿಕೊಂಡಿದೆ. ಸುವರ್ಣ ಮಹೋತ್ಸವದೊಂದಿಗೆ ಈಟಿವಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಲಿ. ಈನಾಡು ಗ್ರೂಪ್ ಚೇರ್ಮನ್ ಶ್ರೀಯುತ ರಾಮೋಜಿ ರಾವ್ ಹಾಗೂ ಈಟಿವಿ ಸಿಬ್ಬಂದಿಗೆ ಶುಭಾಶಯಗಳು ಎಂದು ವಿಶ್ ಮಾಡಿದ್ದಾರೆ.
ಈಟಿವಿಯೊಂದಿಗೆ ನನಗೆ ಅವಿನಾಭಾವ ಸಂಬಂಧ ಇದೆ. 'ಶಾಂತಿ ನಿವಾಸಂ' ಧಾರಾವಾಹಿ ಪ್ರಸಾರವಾಗಿದ್ದು ಈ ಟಿವಿಯಲ್ಲಿ. ಆಗ ನಿರ್ದೇಶಕನಾಗಿ ಈಟಿವಿಯಲ್ಲಿ ನನ್ನ ಹೆಸರನ್ನು ನೋಡಿ ಬಹಳ ಖುಷಿಯಾಯ್ತು. ಈಟಿವಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡುತ್ತಾರೆ. ಒಂದು ಸುದ್ದಿ ನಿಜವೋ ಸುಳ್ಳೋ ಎಂದು ತಿಳಿಯಲು ಎಲ್ಲರೂ ಈಟಿವಿ ನೋಡುತ್ತಾರೆ. ಅಂತಹ ನಂಬಿಕೆಯನ್ನು ಉಳಿಸಿಕೊಂಡು 25 ವರ್ಷಗಳನ್ನು ಪೂರೈಸಿರುವ ಈಟಿವಿಗೆ ಅಭಿನಂದನೆಗಳು ಎಂದು 'ಬಾಹುಬಲಿ' ನಿರ್ದೇಶಕ ಎಸ್.ಎಸ್. ರಾಜಮೌಳಿ ಶುಭ ಕೋರಿದ್ದಾರೆ.
ಇವರೆಲ್ಲರೊಂದಿಗೆ ಸುಹಾಸಿನಿ ಮಣಿರತ್ನಂ, ವಿಕ್ಟರಿ ವೆಂಕಟೇಶ್, ಖ್ಯಾತ ನಿರ್ದೇಶಕ ರಾಘವೇಂದ್ರ ರಾವ್, ಹಾಸ್ಯ ನಟಿ ಆಲಿ, ಸಂಗೀತ ನಿರ್ದೇಶಕರಾದ ಎಂ.ಎಂ. ಕೀರವಾಣಿ, ದೇವಿ ಶ್ರೀ ಪ್ರಸಾದ್, ನಟ ರಾಜೇಂದ್ರ ಪ್ರಸಾದ್ ಹಾಗೂ ಇನ್ನಿತರರು ಈಟಿವಿಗೆ ಶುಭ ಕೋರಿದ್ದಾರೆ.