ಮೀ ಟೂ ಆರೋಪ ಪ್ರತ್ಯಾರೋಪದ ಬಳಿಕ ಕೆಲವು ದಿನಗಳಿಂದ ಆ್ಯಕ್ಟಿಂಗ್ನಿಂದ ದೂರವಿದ್ದ ನಟಿ ಶ್ರುತಿ ಹರಿಹರನ್ ಈಗ ಮತ್ತೆ ವಾಪಸಾಗಿದ್ದಾರೆ. ಅಭಿಮಾನಿಗಳಿಗೆ ಕೂಡಾ ಶ್ರುತಿ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಕಾಡಿತ್ತು. ಆದರೆ ಈ ಬಾರಿ ಅವರು ಮನೆ ಮಾರಾಟಕ್ಕೆ ಇಟ್ಟಿದ್ದಾರೆ.

ಅರೆ ಇದೇನಿದು ಶ್ರುತಿ ತಮ್ಮ ಮನೆಯನ್ನು ಏಕೆ ಮಾರಾಟಕ್ಕೆ ಇಟ್ಟಿದ್ದಾರೆ ಎಂದು ಹುಬ್ಬೇರಿಸಬೇಡಿ. ಅವರು ನಟಿಸುತ್ತಿರುವುದು 'ಮನೆ ಮಾರಾಟಕ್ಕಿದೆ' ಎಂಬ ಸಿನಿಮಾದಲ್ಲಿ. ಸಾಧುಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್, ರವಿಶಂಕರ್ ಗೌಡ ಹೀಗೆ ನಾಲ್ವರು ಕಾಮಿಡಿ ನಟರ ಜೊತೆ ಶ್ರುತಿ ಹರಿಹರನ್ ನಟಿಸಲಿದ್ದಾರೆ. ಶ್ರಾವಣಿ ಸುಬ್ರಹ್ಮಣ್ಯ, ಶ್ರೀಕಂಠ ಮತ್ತು ಪಟಾಕಿ ಸಿನಿಮಾಗಳನ್ನು ನಿರ್ದೇಶಿಸಿದ್ದ ಮಂಜು ಸ್ವರಾಜ್ 'ಮನೆ ಮಾರಾಟಕ್ಕಿದೆ' ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ನಾಲ್ವರು ಕಾಮಿಡಿ ನಟರನ್ನು ಇಟ್ಟುಕೊಂಡು ನಿರ್ದೇಶಕ ಮಂಜು ಸ್ವರಾಜ್ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಶ್ರುತಿ ಪಾತ್ರ ಏನೆಂಬುದು ಅನ್ನೋದು ಇನ್ನೂ ರಿವೀಲ್ ಆಗಿಲ್ಲ. ಟೈಟಲ್ನಿಂದಲೇ ಸಿಕ್ಕಾಪಟ್ಟೆ ಹೈಪ್ ಸೃಷ್ಟಿಸಿರುವ ಈ ಚಿತ್ರ ಬಹುತೇಕ ಶೂಟಿಂಗ್ ಮುಗಿಸಿ ರಿಲೀಸ್ಗೆ ರೆಡಿಯಾಗಿದೆ. ನಿರ್ದೇಶಕ ಮಂಜು ಸದ್ಯದಲ್ಲೇ ಸಿನಿಮಾ ಪೋಸ್ಟರ್ ಹಾಗೂ ಟ್ರೇಲರ್ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.