ಮಂಗಳೂರು: ಮಹಿಳೆಯಿಂದ ಸಮಾಜಕ್ಕೆ ಗೌರವಯುತವಾದ ಕೊಡುಗೆ ಬಹಳಷ್ಟಿದೆ. ಇದರಲ್ಲಿ ತುಳುನಾಡಿನ ಅಳಿಯಸಂತಾನ ಪದ್ಧತಿಯೂ ಒಂದು. ತುಳುನಾಡಿನ ಪದ್ಧತಿ ಪ್ರಕಾರ ಮಕ್ಕಳನ್ನು ಗುರುತಿಸುವುದೇ ಅಮ್ಮನ ಕುಟುಂಬದ ಮೂಲಕ ಎಂದು ಶಿಲ್ಪಾ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕೆಎಂಸಿಯಲ್ಲಿ ಹೆರಿಗೆ ಮತ್ತು ಮಕ್ಕಳ ಆರೈಕೆಗೆ ವಿಸ್ತೃತ ಸೇವೆಗೆ ನೂತನ ಕೇಂದ್ರವನ್ನು ಉದ್ಘಾಟಿಸಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ 'ಮಾತೆರೆಗ್ಲಾ ಎನ್ನ ನಮಸ್ಕಾರ' ಎಂದು ತುಳುವಿನಲ್ಲಿ ವಂದನೆ ತಿಳಿಸಿದರು.
ನಾನು ಹೆರಿಗೆಯ ಬಳಿಕ ಆರೋಗ್ಯ ಮತ್ತು ಫಿಟ್ ನೆಸ್ಗೆ ತುಂಬಾ ಸಮಯ ನಿಗದಿ ಇಡುತ್ತಿದ್ದೇನೆ. ಗರ್ಭಿಣಿಯರು ಕುಟುಂಬದೊಂದಿಗೆ ತಮ್ಮ ಆರೋಗ್ಯಕ್ಕೂ ಅಷ್ಟೇ ನಿಗಾ ವಹಿಸಬೇಕಾಗುತ್ತದೆ. ಅಲ್ಲದೆ ಹೆರಿಗೆಯ ಬಳಿಕ ಮಗುವಿಗೂ ಅಷ್ಟೇ ಸಮಯ ಇರಿಸಬೇಕಾಗುತ್ತದೆ. ಮಗು ಮಾನಸಿಕವಾಗಿ ಸದೃಢವಾಗಬೇಕಾದರೆ ತಾಯಿ ಮಗುವಿನ ಮೇಲೆ ಅತೀ ಕಾಳಜಿ ವಹಿಸಬೇಕಾಗುತ್ತದೆ ಎಂದು ಹೇಳಿದರು.
ನನಗೂ ಮೊದಲಬಾರಿ ಗರ್ಭಪಾತವಾಗಿದ್ದು, ಬಳಿಕ ಎರಡನೆಯ ಗರ್ಭಧಾರಣೆಯ ಸಂದರ್ಭ ಕೆಎಂಸಿ ತುಂಬಾ ಉತ್ತಮವಾಗಿ ಉಪಚಾರ ಮಾಡಿದೆ. ಈ ಬಗ್ಗೆ ನನಗೆ ಹೆಮ್ಮೆಯಿದೆ. ಮಂಗಳೂರು ಉತ್ತಮ ಆಸ್ಪತ್ರೆಗಳನ್ನು ಒಳಗೊಂಡ ನಗರ. ಆದರೆ ಕೆಎಂಸಿ ಎಲ್ಲಾ ಆಸ್ಪತ್ರೆಗಳಿಗಿಂತಲೂ ವಿಭಿನ್ನವಾಗಿದೆ ಎಂದು ಶಿಲ್ಪಾ ಶೆಟ್ಟಿ ಹೇಳಿದರು.