ಪ್ರವಾಹದಿಂದಾಗಿ ಉತ್ತರ ಕರ್ನಾಟಕದ ಜನರು ಬೀದಿಪಾಲಾಗಿದ್ದು ಅವರಿಗೆ ರಾಜ್ಯದ ಎಲ್ಲೆಡೆಯಿಂದ ಜನರು ಅವಶ್ಯಕ ವಸ್ತುಗಳನ್ನು ತಲುಪಿಸುತ್ತಿದ್ದಾರೆ. ಇನ್ನು ಸ್ಯಾಂಡಲ್ವುಡ್ ನಟ-ನಟಿಯರು ಕೂಡಾ ನೆರೆಸಂತ್ರಸ್ತರಿಗಾಗಿ ಹಣ ಹಾಗೂ ಅವಶ್ಯಕ ವಸ್ತುಗಳನ್ನು ನೀಡುತ್ತಿದ್ದಾರೆ.
ನಟಿ ತಾರಾ ಅನುರಾಧ ಹಾಗೂ ಸುಧಾರಾಣಿ 4-5 ದಿನಗಳಿಂದ ಬೆಂಗಳೂರಿನ ಕಾಕ್ಸ್ಟೌನ್ ಹಾಗೂ ಭಾರತಿನಗರದ ವ್ಯಾಪ್ತಿಗಳಲ್ಲಿ ಜನರಿಂದ ದೇಣಿಗೆ ಸಂಗ್ರಹಿಸುತ್ತಿದ್ದರು. ಇಂದು ಆ ಹಣವನ್ನು ಮುಖ್ಯಮಂತ್ರಿ ಬಳಿ ತೆರಳಿ ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ. ಇದುವರೆಗೂ 1.70 ಲಕ್ಷ ರೂ ಹಣ ಸಂಗ್ರಹವಾಗಿದೆ. ಇಂದು ವಿಧಾನಸೌಧದಲ್ಲಿ ತಾರಾ ಹಾಗೂ ಸುಧಾರಾಣಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಂಗ್ರಹವಾದ ಹಣವನ್ನು ಹಸ್ತಾಂತರಿಸಿದ್ದಾರೆ. ಸಾಲು ಸಾಲು ರಜೆಗಳಿದ್ದ ಕಾರಣ ಬ್ಯಾಂಕ್ ಕೂಡಾ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಹಾಗಾಗಿ ಇಂದು ಇಬ್ಬರೂ ನಟಿಯರು ಸಿಎಂ ಅವರನ್ನು ಭೇಟಿಯಾಗಿ ಚೆಕ್ ನೀಡಿದ್ದಾರೆ. ಇನ್ನು ಸಂತ್ರಸ್ತರಿಗಾಗಿ ತಾರಾ ಹಾಗೂ ಸುಧಾರಾಣಿ ಇಬ್ಬರೂ ವೈಯಕ್ತಿಕವಾಗಿ ತಲಾ ಒಂದು ಲಕ್ಷ ರೂಪಾಯಿ ನೀಡಿದ್ದಾರೆ.