ಲಗಾಮ್ ಚಿತ್ರದ ಮುಹೂರ್ತ ಕಂಠೀವರ ಸ್ಟುಡಿಯೋದಲ್ಲಿ ನೆರೆವೇರಿತು. ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾಗೆ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಶುಭ ಹಾರೈಯಿಸಿದರು.
ಈ ಸಿನಿಮಾ ರಾಜಕೀಯ ವಿಡಂಬನೆಯ ಕಥೆಯಾಗಿದೆ. ಸದ್ಯದ ಕೊರೊನಾ ಹಾಗೂ ಹಣ ವರ್ಗಾವಣೆಯ ಸುತ್ತ ಸಿನಿಮಾ ಕಥೆ ನಡೆಯುತ್ತಂತೆ. ಬಹಳ ವರ್ಷಗಳ ಬಳಿಕ ನಿರ್ದೇಶಕ ಕೆ.ಮಾದೇಶ್ ಈ ಸಿನಿಮಾವನ್ನ ನಿರ್ದೇಶಿಸುತ್ತಿದ್ದಾರೆ.
ಈ ಚಿತ್ರದಲ್ಲಿ ಉಪೇಂದ್ರ ಹೊಸ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬ್ಯೂಟಿ ಕ್ವೀನ್ ಹರಿಪ್ರಿಯಾ ಮೊದಲ ಬಾರಿಗೆ ಉಪೇಂದ್ರ ಜೊತೆ ಸ್ಕ್ರೀನ್ ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಹರಿಪ್ರಿಯಾರಿಗೆ ಉಪೇಂದ್ರ ಮಾಡುವ ಕೆಲಸಗಳಿಗೆ ಸಹಾಯವಾಗಿ ನಿಲ್ಲುವ ಪಾತ್ರವಂತೆ.
ಸಾಧು ಕೋಕಿಲ ಸಿನಿಮಾಗೆ ಮ್ಯೂಸಿಕ್ ನೀಡುತ್ತಿದ್ದಾರೆ. ಬಹಳ ವರ್ಷಗಳ ಬಳಿಕ ಉಪೇಂದ್ರ ಸಿನಿಮಾಗೆ ಸಾಧು ಕೋಕಿಲ ಸಂಗೀತ ನೀಡುತ್ತಿರೋದು ವಿಶೇಷ. ಸಾಧು ಹೇಳುವ ಹಾಗೆ ಲಗಾಮ್ ಸಿನಿಮಾ ಹಾಡುಗಳಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡುತ್ತೆ ಅಂತ ಭವಿಷ್ಯ ನುಡಿದಿದ್ದಾರೆ.
ರಂಗಾಯಣ ರಘು, ಶೋಭರಾಜ್ ಸೇರಿದಂತೆ ಹಲವಾರು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಕೊರೊನಾ ಮುಂಜಾಗ್ರತಾ ಕ್ರಮಗಳನ್ನ ವಹಿಸಿಕೊಂಡು ಇದೇ ಏಪ್ರಿಲ್ 26ರಿಂದ ಮೈಸೂರಿನಲ್ಲಿ ಲಗಾಮ್ ಸಿನಿಮಾವನ್ನ ಚಿತ್ರೀಕರಣ ಮಾಡಲು ನಿರ್ದೇಶಕ ಕೆ.ಮಾದೇಶ್ ಪ್ಲಾನ್ ಮಾಡಿದ್ದಾರೆ.
ಎಂ ಎಸ್ ರಮೇಶ್ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ರಾಜೇಶ್ ಕ್ಯಾಮೆರಾ ವರ್ಕ್ ಮಾಡಲಿದ್ದಾರೆ. ನಿರ್ದೇಶಕ ಕೆ.ಮಾದೇಶ ಸಂಬಂಧಿಯಾಗಿರೋ ಎಂಆರ್‌ಗೌಡ ಲಗಾಮ್ ಚಿತ್ರ ನಿರ್ಮಿಸುತ್ತಿದ್ದಾರೆ. ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲು ನಿರ್ಮಾಪಕರು ಸಿದ್ಧತೆ ನಡೆಸಿದ್ದಾರೆ.