ಮುಂಬೈ: ಹೆರಿಗೆ ನೋವಿನ ವೇಳೆ ಸೂಕ್ತ ಆ್ಯಂಬುಲೆನ್ಸ್ ಸೇವೆ ದೊರೆಯದ ಪರಿಣಾಮ 25 ವರ್ಷದ ಉದಯೋನ್ಮುಖ ನಟಿ ಹಾಗೂ ಆಕೆಯ ಹಸುಗೂಸು ಸಾವನ್ನಪ್ಪಿದ ಘಟನೆ ಮುಂಬೈನಿಂದ ವರದಿಯಾಗಿದೆ.
ಮರಾಠಿ ಚಿತ್ರರಂಗದಲ್ಲಿ ಕೆಲ ಸಿನಿಮಾದಲ್ಲಿ ನಟಿಸಿ ಗುರುತಿಸಿಕೊಂಡಿದ್ದ ಪೂಜಾ ಝುಂಜರ್ ಸಾವನ್ನಪ್ಪಿದ ನಟಿ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಮತದಾನದ ಮುನ್ನಾದಿನ ಈ ದುರಂತ ನಡೆದಿದ್ದು, ರಾಜ್ಯದ ಆರೋಗ್ಯ ಇಲಾಖೆಯ ಕಾರ್ಯವೈಖರಿ ಬಗ್ಗೆ ಪ್ರಶ್ನೆ ಎದ್ದಿದೆ.
ಆಗಿದ್ದೇನು?
ಅ.20ರ ನಸುಕಿನ ಜಾವ 2ರ ಸುಮಾರಿಗೆ ಮುಂಬೈನಿಂದ 590ಕಿ.ಮೀ.ದೂರದ ಹಿಂಗೊಲಿ ಜಿಲ್ಲೆಯಲ್ಲಿ ವಾಸವಿದ್ದ ಪೂಜಾಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆ್ಯಂಬುಲೆನ್ಸ್ ಸೂಕ್ತ ಸಮಯಕ್ಕೆ ಬರದ ಕಾರಣ ಆಕೆಯನ್ನು ಗೋರೆಗಾವ್ನಲ್ಲಿರುವ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಸೇರಿಸಲಾಗಿದೆ.
ಆದರೆ ಹೆರಿಗೆಯಾದ ಕೆಲ ಹೊತ್ತಿನಲ್ಲಿ ಅಮ್ಮ, ಮಗು ಇಬ್ಬರೂ ಮೃತಪಟ್ಟಿದ್ದಾರೆ. ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್ ಬರದಿರುವುದೇ ಈ ಸಾವಿಗೆ ಕಾರಣ ಎಂದು ಪೂಜಾ ಕುಟುಂಬಸ್ಥರು ಆರೋಪಿಸಿದ್ದಾರೆ.