'ಬಾಹುಬಲಿ' ಚಿತ್ರದ ನಂತರ ಪ್ರಸ್ತುತ ತೆಲುಗು ಚಿತ್ರರಂಗದಲ್ಲಿ ಬಹುನಿರೀಕ್ಷೆಯ ಚಿತ್ರ ಎಂದರೆ ಎಸ್.ಎಸ್.ರಾಜಮೌಳಿ ನಿರ್ದೇಶನದ 'ಆರ್ಆರ್ಆರ್'. ರಾಮ್ಚರಣ್ ತೇಜ ಹಾಗೂ ಜ್ಯೂನಿಯರ್ ಎನ್ಟಿಆರ್ ಮೊದಲ ಬಾರಿಗೆ ಜೊತೆಯಾಗಿ ನಟಿಸುತ್ತಿರುವ ಚಿತ್ರ ಇದು.
ಇನ್ನು ಇದು ರಾಜಮೌಳಿ ನಿರ್ದೇಶನದ ಸಿನಿಮಾ ಎಂದೋ, ರಾಮ್ಚರಣ್-ಜ್ಯೂ.ಎನ್ಟಿಆರ್ ಜೊತೆಗೆ ನಟಿಸುತ್ತಿರುವ ಚಿತ್ರ ಎಂಬ ಕಾರಣಕ್ಕೋ ಈ ಸಿನಿಮಾ ಮೇಲೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗಿದೆ. ಇದಕ್ಕೆ ಪೂರಕವಾಗಿ ಸುಮಾರು 350 ಕೋಟಿ ರೂಪಾಯಿ ಬಜೆಟ್ನಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗುತ್ತಿದೆ. ಸಿನಿಮಾ ತೆಲುಗು ಮಾತ್ರವಲ್ಲ ಹಿಂದಿ, ತಮಿಳು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಒಟ್ಟಿಗೆ ಬಿಡುಗಡೆ ಮಾಡಲು ತಯಾರಿ ನಡೆಸಲಾಗುತ್ತಿದೆ.
ಪ್ರಸ್ತುತ ಶರವೇಗದಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರತಂಡದಿಂದ ಒಂದು ಇಂಟ್ರೆಸ್ಟಿಂಗ್ ವಿಷಯ ಹೊರಬಿದ್ದಿದೆ. ತೆಲುಗು ಮಾತ್ರವಲ್ಲ ಕನ್ನಡ, ಮಲಯಾಳಂ, ತಮಿಳು, ಹಿಂದಿ ವರ್ಷನ್ಗೆ ಜ್ಯೂ. ಎನ್ಟಿಆರ್ ತಾವೇ ಸ್ವತಃ ಡಬ್ಬಿಂಗ್ ಮಾಡಲು ನಿರ್ಧರಿಸಿದ್ದಾರಂತೆ. 'ಇಂತಹ ಪ್ರತಿಷ್ಠಿತ ಚಿತ್ರದ ನನ್ನ ಪಾತ್ರಕ್ಕೆ ಬೇರೆಯವರು ಡಬ್ಬಿಂಗ್ ಮಾಡುವುದು ಚೆನ್ನಾಗಿರುವುದಿಲ್ಲ. ಆದ್ದರಿಂದ ನಾನೇ ಡಬ್ ಮಾಡುತ್ತೇನೆ' ಎಂದು ಜ್ಯೂ. ಎನ್ಟಿಆರ್ ಹೇಳಿದ್ದಾರೆ. ಈಗಾಗಲೇ ಅವರು ಕನ್ನಡ ಭಾಷೆಯನ್ನು ಕಲಿಯುವ ಸಿದ್ಧತೆಯಲ್ಲಿದ್ದಾರಂತೆ. ಇನ್ನು ಜ್ಯೂ. ಎನ್ಟಿಆರ್ ಜೊತೆ ರಾಮ್ಚರಣ್ ತೇಜ ಕೂಡಾ ಈ ಸಾಹಸಕ್ಕೆ ಕೈ ಹಾಕಲಿದ್ದಾರಾ ಎಂಬುದನ್ನು ಕಾದು ನೋಡಬೇಕು.