ಇಲ್ಲೊಂದು ಒಳ್ಳೆಯ ಸಿನಿಮಾ ಆಗುವ ಎಲ್ಲ ಲಕ್ಷಣ ಈ ಕಾಂಬಿನೇಷನ್ನಿಂದಲೇ ಕಂಡು ಬರುತ್ತಿದೆ. ಪದ್ಮಶ್ರೀ ಡಾ. ಗಿರೀಶ್ ಕಾಸರವಳ್ಳಿ ಅವರು ಮತ್ತೆ ಚಿತ್ರ ನಿರ್ದೇಶನಕ್ಕೆ ವಾಪಸ್ಸಾಗಿದ್ದಾರೆ. ಈ ಬಾರಿ ಅವರು ಹೆಸರಾಂತ ಸಾಹಿತಿ ಮುಂಗಾರು ಮಳೆ ಚಿತ್ರದಿಂದ ಮನೆ ಮಾತಾದ ಜಯಂತ್ ಕಾಯ್ಕಿಣಿ ಅವರ ರಚನೆಯ ‘ಹಾಲಿನ ಮೀಸೆ’ ಸಣ್ಣ ಮಕ್ಕಳ ಕಥೆಯಾಧಾರಿತ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಅಂದಹಾಗೆ ಗಿರೀಶ್ ಕಾಸರವಳ್ಳಿ ಅವರು ಏಳು ವರ್ಷಗಳ ಬಳಿಕ ಸಿನಿಮಾ ನಿರ್ದೇಶನಕ್ಕೆ ಮರಳಿದ್ದಾರೆ. ಅವರ ಹಿಂದಿನ ಸಿನಿಮಾ ‘ಕೂರ್ಮಾವತಾರ’ 2012ರಲ್ಲಿ ಬಿಡುಗಡೆಯಾಗಿತ್ತು. ಅದಾದ ಮೇಲೆ 2015 ರಲ್ಲಿ ಕಾಸರವಳ್ಳಿ ಅವರು ಹೆಸರಾಂತ ಮಲಯಾಳಂ ನಿರ್ದೇಶಕ ಅಡೂರು ಗೋಪಾಲಕೃಷ್ಣ ಅವರ ಬಗ್ಗೆ ಸಾಕ್ಷ್ಯಚಿತ್ರ ನಿರ್ದೇಶನ ಮಾಡಿದ್ದರು. ಆಮೇಲೆ ವಿಧಾನಸೌಧ 60 ವರ್ಷ ತುಂಬಿದ ವಿಚಾರವಾಗಿ ಇವರಿಗೆ ಒಪ್ಪಿಸಿದ್ದ ಸಾಕ್ಷ್ಯಚಿತ್ರ ಕೆಲವು ಕಾರಣಗಳಿಂದ ಮುಂದುವರೆಯಲಿಲ್ಲ.
ಗಿರೀಶ್ ಕಾಸರವಳ್ಳಿ ಅವರು ಈ ಸಣ್ಣ ಕಥೆಗೆ ‘ಇಲ್ಲಿರಲಾರೆ...ಅಲ್ಲಿಗೆ ಹೋಗಲಾರೆ’ ಎಂಬ ಶೀರ್ಷಿಕೆ ಇಡಲು ನಿರ್ಧರಿಸಿದ್ದಾರೆ. ಚಿತ್ರಕಥೆ ಇನ್ನು ಬೆಳವಣಿಗೆಯ ಹಂತದಲ್ಲಿದೆ ಎನ್ನುತ್ತಾರೆ. ಗಿರೀಶ್ ಕಾಸರವಳ್ಳಿ ಅವರ ಸಿನಿಮಾವನ್ನು ಶಿವಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಬಹಳ ವರ್ಷಗಳ ಬಳಿಕ ಹೆಚ್.ಎಂ.ರಾಮಚಂದ್ರ ಛಾಯಾಗ್ರಹಣ ಮಾಡುತ್ತಿದ್ದಾರೆ. ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಾರಂಭ ಆಗುವ ಗಿರೀಶ್ ಕಾಸರವಳ್ಳಿ ಸಿನಿಮಾಕ್ಕೆ ತಾರಾಗಣದ ಆಯ್ಕೆ ನಡೆಯುತ್ತಿದೆ.