ಕನ್ನಡ ಚಿತ್ರರಂಗದಲ್ಲಿ 'ವಾಯುಪುತ್ರ' ನಾಗಿ ಎಂಟ್ರಿ ಕೊಟ್ಟು ವಿಭಿನ್ನ ಸಿನಿಮಾಗಳ ಮೂಲಕ ಹೆಸರು ಮಾಡಿದ ಚಿರಂಜೀವಿ ಸರ್ಜಾ ಇನ್ನು ನೆನಪು ಮಾತ್ರ. ಲವರ್ ಬಾಯ್ , ಪೊಲೀಸ್ ಪಾತ್ರ, ಹಳ್ಳಿ ಹುಡುಗನಾಗಿ ತೆರೆ ಮೇಲೆ ಮಿಂಚಿದ್ದ ಅಭಿಮಾನಿಗಳ ಮೆಚ್ಚಿನ ಚಿರು ಭಾನುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇದುವರೆಗೂ ಚಿರಂಜೀವಿ ಸರ್ಜಾ ನಟಿಸಿದ್ದ 22 ಚಿತ್ರಗಳು, ನಿರ್ಮಾಪಕರ ಪೈಸಾ ವಸೂಲ್ ಸಿನಿಮಾಗಳಾಗಿವೆ ಅನ್ನೋದು ಕೆಲ ನಿರ್ಮಾಪಕ ಮಾತು. ಒಂದು ವರ್ಷದಲ್ಲಿ ಕಡಿಮೆ ಅಂದರೂ ಚಿರಂಜೀವಿ ಸರ್ಜಾ ಅಭಿನಯದ, 2-3 ಸಿನಿಮಾಗಳು ತೆರೆ ಕಾಣುತ್ತಿದ್ದವು. ಹೀಗಾಗಿ ಚಿರಂಜೀವಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಆದರೆ ಚಿರಂಜೀವಿ ಕಣ್ಣು ಮುಚ್ಚುವ ಮುನ್ನ ಅವರು ಒಪ್ಪಿಕೊಂಡಿದ್ದ ಚಿತ್ರಗಳ ಬಗ್ಗೆ ಕೇಳಿದರೆ ನಿಜಕ್ಕೂ ನಿಮಗೆ ಆಶ್ಚರ್ಯವಾಗುತ್ತದೆ.
ಚಿರಂಜೀವಿ ಸರ್ಜಾ 5-6 ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. 'ರಣಂ' ಚಿತ್ರದ ಶೂಟಿಂಗ್ ಮುಗಿಸಿದ್ದ ಚಿರಂಜೀವಿ ಸರ್ಜಾ ಕ್ಷತ್ರಿಯ, ವೀರಂ, ಖೈದಿ, ರಾಜ ಮಾರ್ತಾಂಡ , ದೊಡ್ಡೋರು ಹಾಗೂ ಸಹೋದರ ಧ್ರುವ ಸರ್ಜಾ, ಮಾವ ಅರ್ಜುನ್ ಸರ್ಜಾ ಅವರೊಂದಿಗೆ ಹೆಸರಿಡದ ಸಿನಿಮಾವೊಂದರಲ್ಲಿ ನಟಿಸಬೇಕಿತ್ತು.
ಲಾಕ್‌ಡೌನ್ ಮುಗಿದ ನಂತರ ಯುವ ನಿರ್ದೇಶಕ ಅನಿಲ್ ಮಂಡ್ಯ ನಿರ್ದೇಶನದ 'ಕ್ಷತ್ರಿಯ' ಹೆಸರಿನ ಸಿನಿಮಾ ಆರಂಭ ಆಗಬೇಕಿತ್ತು. ಈ ಮಧ್ಯೆ ಆಗಸ್ಟ್ ತಿಂಗಳಲ್ಲಿ 'ವೀರಂ' ಹೆಸರಿನ ಸಿನಿಮಾ ಆರಂಭವಾಗಲು ಎಲ್ಲಾ ಸಿದ್ಧತೆಗಳು ಕೂಡಾ ನಡೆದಿದ್ದವು. ಈ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ರಮೇಶ್ ರಾಜ್ ಲಾಕ್‌ಡೌನ್ ಆರಂಭಕ್ಕೂ ಮುನ್ನ ಚಿರಂಜೀವಿ ಸರ್ಜಾ ಮನೆಗೆ ತೆರಳಿ ಚಿತ್ರದ ಮಾತುಕಥೆ ನಡೆಸಿ 9 ಲಕ್ಷ ರೂಪಾಯಿ ಅಡ್ವಾನ್ಸ್ ನೀಡಿ ಬಂದಿದ್ದರಂತೆ. ಹಾಗೆಂದು ನಿರ್ಮಾಪಕ ರಮೇಶ್ ರಾಜ್ ಅವರೇ ಹೇಳಿದ್ದಾರೆ.
10 ಕೋಟಿ ರೂಪಾಯಿ ವೆಚ್ಚದಲ್ಲಿ, 'ದೊಡ್ಡೋರು' ಎಂಬ ಹೆಸರಿನ ಸಿನಿಮಾಗೆ, ಚಿರಂಜೀವಿ ಸರ್ಜಾ ಒಪ್ಪಿಕೊಂಡಿದ್ದರಂತೆ. ಈ ಸಿನಿಮಾವನ್ನು ಅಲೆಮಾರಿ, ಕಾಲೇಜು ಕುಮಾರ್ ಸಿನಿಮಾಗಳ ನಿರ್ದೇಶಕ ಹರಿ ಸಂತು ನಿರ್ದೇಶನ ಮಾಡಬೇಕಿತ್ತು. 'ದೊಡ್ಡೋರು ' ಎಂಬ ಟೈಟಲ್ ಹೊಂದಿರುವ ಸಿನಿಮಾ ರಾಜಕೀಯ ಹಾಗೂ ರೌಡಿಸಂ ಕಥೆಯಂತೆ. ಈ ಕಥೆಯನ್ನು ಚಿರಂಜೀವಿ ಸರ್ಜಾ 2017ರಲ್ಲಿ ಹರಿಸಂತು ಅವರಿಗೆ ಹೇಳಿದ್ದರಂತೆ. ಈ ಸಿನಿಮಾ ಮಾಡೋಣ ಅಂತ ಸ್ವತಃ ಚಿರಂಜೀವಿ ಸರ್ಜಾ ಕೆಲವು ನಿರ್ಮಾಪಕರನ್ನು ಭೇಟಿ ಮಾಡಿದ್ದರಂತೆ. ನಿರ್ಮಾಪಕ ಕನಕಪುರ ಶ್ರೀನಿವಾಸ್ 10 ಕೋಟಿ ರೂಪಾಯಿ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣ ಮಾಡಲು ಮುಂದೆ ಬಂದಿದ್ದಾರೆ.
ಇಷ್ಟು ಸಿನಿಮಾಗಳ ಮಧ್ಯೆ ಚಿರಂಜೀವಿ ಸರ್ಜಾ ಪವರ್ ಫುಲ್ ಟೈಟಲ್ ಹೊಂದಿರುವ, 'ರಾಜ ಮಾರ್ತಾಂಡ' ಎಂಬ ಚಿತ್ರವನ್ನು ಕೂಡಾ ಒಪ್ಪಿಕೊಂಡಿದ್ದರು. ಚಿತ್ರದ ಬಹುತೇಕ ಟಾಕಿ ಪೋಷನ್ ಮುಗಿದಿತ್ತು. ದರ್ಶನ್ ಗೆಳೆಯರಲ್ಲಿ ಒಬ್ಬರಾಗಿರುವ ಶಿವಕುಮಾರ್ ಎಂಬುವವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದರು. ಶಿವಕುಮಾರ್ ಹೇಳುವ ಪ್ರಕಾರ ನಮ್ಮ ಸಿನಿಮಾದಲ್ಲಿ ಎರಡು ಹಾಡುಗಳು ಮಾತ್ರ ಬಾಕಿ ಇತ್ತು. ಈಗ ಚಿರಂಜೀವಿ ಸರ್ಜಾ ಇಲ್ಲದೆ ಇರುವುದರಿಂದ ಈ ಎರಡು ಹಾಡುಗಳು ಇಲ್ಲದೆ ಈ ಸಿನಿಮಾವನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರಂತೆ.
ಈ ಸಿನಿಮಾಗಳೊಂದಿಗೆ ಚಿರಂಜೀವಿ ಸರ್ಜಾ ಇಷ್ಟಪಟ್ಟು ಮಾಡಬೇಕು ಎಂದುಕೊಂಡಿದ್ದ ಚಿತ್ರ ತಮಿಳಿನ ಕಾರ್ತಿಕ್ ಅಭಿನಯದ 'ಖೈದಿ'. ಈ ಸಿನಿಮಾವನ್ನು ಕನ್ನಡದಲ್ಲಿ ರೀಮೇಕ್ ಮಾಡಲು 'ಅಯೋಗ್ಯ' , 'ಮದಗಜ' ಸಿನಿಮಾ ನಿರ್ದೇಶಕ ಮಹೇಶ್ ರೆಡಿಯಾಗಿದ್ದರಂತೆ. ತಮಿಳು ನಟ ಕಾರ್ತಿಕ್ ಜೊತೆ ಚಿರಂಜೀವಿ ಸರ್ಜಾಗೆ ಒಳ್ಳೆ ಫ್ರೆಂಡ್ಶಿಪ್ ಇದ್ದು ಆ ಚಿತ್ರದ ರೈಟ್ಸ್ ಕೊಡಲು ಒಪ್ಪಿದ್ದರಂತೆ. 'ಮದಗಜ' ಸಿನಿಮಾ ನಂತರ ನಿರ್ದೇಶಕ ಮಹೇಶ್ ಕುಮಾರ್ ಚಿರಂಜೀವಿ ಅವರೊಂದಿಗೆ ಈ ಸಿನಿಮಾ ಮಾಡಬೇಕು ಎಂದುಕೊಂಡಿದ್ದರಂತೆ. ಆದರೆ ಈ ಸಿನಿಮಾ ಮಾಡಲು, ಈಗ ನನ್ನ ಗೆಳೆಯ ಹಾಗೂ ನನ್ನ ಹೀರೋನೇ ಇಲ್ಲ ಹೇಗೆ ಮಾಡೋದು ಎನ್ನುತ್ತಾರೆ ಮಹೇಶ್.
ಇದೆಲ್ಲಾ ಸಿನಿಮಾಗಳೊಂದಿಗೆ ಮಾವ ಅರ್ಜುನ್ ಸರ್ಜಾ, ಸಹೋದರ ಧ್ರುವಾ ಸರ್ಜಾ ಜೊತೆ ಬಿಗ್ ಬಜೆಟ್ ನಿರ್ಮಾಣದ ಚಿತ್ರವೊಂದರಲ್ಲಿ ಚಿರು ನಟಿಸಲು ಎಲ್ಲಾ ತಯಾರಿ ಮಾಡಿಕೊಂಡಿದ್ದರು ಎಂಬುದು ಚಿರಂಜೀವಿ ಸರ್ಜಾ ಆಪ್ತರ ಮಾತು.
ಒಟ್ಟಾರೆ ಚಿರಂಜೀವಿ ಸರ್ಜಾ ಅವರ ಜೊತೆ ನಿರ್ಮಾಪಕರು 20-30 ಕೋಟಿ ರೂಪಾಯಿ ಬಂಡವಾಳ ಹೂಡಿ ಸಿನಿಮಾ ಮಾಡಲು ರೆಡಿಯಾಗಿದ್ದರಂತೆ. ಆದರೆ ಇಂದು ಚಿರಂಜೀವಿ ಸರ್ಜಾ ನಮ್ಮೊಂದಿಗೆ ಇಲ್ಲದಿರುವುದು ಕನ್ನಡ ಚಿತ್ರರಂಗ ಹಾಗೂ ನಿರ್ಮಾಪಕರಿಗೆ ತುಂಬಲಾರದ ನಷ್ಟವಾಗಿರುವುದಂತೂ ನಿಜ.