ಚಿರಂಜೀವಿ ಸರ್ಜಾ ತೆರೆ ಮೇಲೆ ಮಾತ್ರ ಹೀರೋ ಆಗಿರಲಿಲ್ಲ. ನಿಜ ಜೀವನದಲ್ಲಿ ಕೂಡಾ ಅವರು ಒಳ್ಳೆ ಮನಸುಳ್ಳ ವ್ಯಕ್ತಿಯಾಗಿದ್ದರು. ನಾನೊಬ್ಬ ಹೀರೋ ಎಂದು ಸ್ವಲ್ಪವೂ ಅಹಂ ಇಲ್ಲದೆ ಎಲ್ಲರೊಂದಿಗೆ ನಗುನಗುತ್ತಾ ಸ್ನೇಹಿತನಂತೆ ಬೆರೆಯುತ್ತಿದ್ದ ವ್ಯಕ್ತಿ. ಅಷ್ಟೇ ಅಲ್ಲ ಅವರು ಎಷ್ಟೋ ಜನರಿಗೆ ಸಹಾಯ ಕೂಡಾ ಮಾಡಿದ್ದಾರೆ.
ಸಂಗೀತ ನಿರ್ದೇಶಕ, ರ್‍ಯಾಪರ್ ಚಂದನ್ ಶೆಟ್ಟಿ ಕೂಡಾ ಚಿರಂಜೀವಿ ಸರ್ಜಾ ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಚಿರು ಅಂತಿಮ ದರ್ಶನ ಪಡೆದು ಮಾತನಾಡಿದ ಚಂದನ್ ಶೆಟ್ಟಿ ಚಿರಂಜೀವಿ ಸರ್ಜಾ ಅವರೇ ನನ್ನ ಗಾಡ್ ಫಾದರ್ ಎಂದು ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ. ಅವರು ನನಗೆ ಆಶ್ರಯದಾತರಾಗಿದ್ದರು. ನನ್ನನ್ನು ಗಾಂಧಿನಗರಕ್ಕೆ ಪರಿಚಯ ಮಾಡಿದ್ದೇ ಅವರೇ. ನನ್ನ ಪ್ರತಿಭೆ ಗುರುತಿಸಿ ನನ್ನನ್ನು ಅರ್ಜುನ್ ಸರ್ಜಾ ಅವರಿಗೆ ಪರಿಯಿಸಿದರು. ಅಲ್ಲದೆ ಅವರ ಮನೆಯಲ್ಲೇ ನನಗೆ ಆಶ್ರಯ ನೀಡಿದ್ದರು.

ನನ್ನನ್ನು ಒಳ್ಳೆಯ ಸಿಂಗರ್ ಎಂದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೂ ಪರಿಚಯ ಮಾಡಿಕೊಟ್ಟಿದ್ದರು. ನಾನು ನಿನ್ನೆ ಬೆಳಗ್ಗೆ ಕೂಡಾ ಚಿರು ಅವರನ್ನು ನೆನಪಿಸಿಕೊಂಡಿದ್ದೆ. ಆದರೆ ಮಧ್ಯಾಹ್ನದ ವೇಳೆಗೆ ಅವರ ನಿಧನದ ಸುದ್ದಿ ಕೇಳಿ ಶಾಕ್ ಆಗಿದೆ. ನನ್ನ ಮದುವೆ ಸಮಯದಲ್ಲಿ ಚಿರು ಅವರನ್ನು ಕೊನೆಯ ಬಾರಿ ಭೇಟಿ ಮಾಡಿದ್ದೆ. ಲಾಕ್ಡೌನ್ ಇದ್ದ ಕಾರಣ ಕೆಲವು ದಿನಗಳಿಂದ ಅವರನ್ನು ಭೇಟಿ ಮಾಡಲು ಸಾಧ್ಯ ಆಗಿರಲಿಲ್ಲ. ಚಿರಂಜೀವಿ ಸರ್ಜಾ ಈಗ ನಮ್ಮ ಜೊತೆ ಇಲ್ಲ. ಅದರೂ ನಾನು ಜೀವನಪೂರ್ತಿ ಅವರನ್ನು ಮರೆಯುವುದಿಲ್ಲ. ಮೇಘನಾ ರಾಜ್ ಹಾಗೂ ಕುಟುಂಬದ ಎಲ್ಲಾ ಸದಸ್ಯರಿಗೂ ದೇವರು ದು:ಖ ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಚಂದನ್ಶೆಟ್ಟಿ ತಮ್ಮ ಆಶ್ರಯದಾತನಿಗೆ ಅಂತಿಮ ನಮನ ಸಲ್ಲಿಸಿದರು.