ಕೋಲಾರ: ಬಿಗ್ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು ವಿವಾಹದಿಂದ ಏರ್ಪಟ್ಟಿರುವ ವಿವಾದದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೋಲಾರ ನಗರದ ಕುರುಬರ ಪೇಟೆಯಲ್ಲಿ ಪ್ರಕರಣ ನಡೆದಿದೆ.
ಮದುವೆ ವಿಚಾರವಾಗಿ ಉಂಟಾಗಿದ್ದ ವಿವಾದದ ಹಿನ್ನೆಲೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗ್ತಿದ್ದು, ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾರ್ಚ್ 28ರಂದು ಮಂಡ್ಯ ಮೂಲದ ನಾಗಾರ್ಜುನ್ ಎಂಬುವರೊಂದಿಗೆ ಮದುವೆಯಾಗಿದ್ದ ಚೈತ್ರಾ ಕೊಟ್ಟೂರು, ಮದುವೆಯಾದ ದಿನವೇ ಪೊಲೀಸ್ ಠಾಣೆ ಮಟ್ಟಿಲೇರಿದ್ದರು. ಇದೀಗ ವಿವಾಹ ಸಂಬಂಧದಲ್ಲಿ ಕೇಳಿಬಂದ ವಿವಾದಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಉದ್ಯಮಿಯ ಕೈಹಿಡಿದಿದ್ದ ಚೈತ್ರಾ
ಬಿಗ್ಬಾಸ್ ಸ್ಪರ್ಧಿಯಾಗಿದ್ದ ನಟಿ ಚೈತ್ರಾ ಕೊಟ್ಟೂರು ಅವರು ಕನ್‌ಸ್ಟ್ರಕ್ಷನ್ ಉದ್ಯಮಿ ನಾಗಾರ್ಜುನ ಎಂಬವರನ್ನು ವರಿಸಿದ್ದರು. ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಇವರ ವಿವಾಹ ಸರಳವಾಗಿ ನೆರವೇರಿತ್ತು.
ಆದರೆ ವಿವಾಹವಾದ ಕೆಲವೇ ಗಂಟೆಗಳಲ್ಲಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ವರನ ಕುಟುಂಬಸ್ಥರು ಚೈತ್ರಾ ಕೊಟ್ಟೂರು ಜೊತೆ ಬಲವಂತವಾಗಿ ತಮ್ಮ ಮಗನಿಗೆ ಮದುವೆ ಮಾಡಿಸಲಾಗಿದೆ ಎಂದು ಆರೋಪಿಸಿದ್ದರು.
ಅದರಂತೆ ಕೋಲಾರ ನಗರದ ಕುರುಬರ ಪೇಟೆಯಲ್ಲಿರುವ ಚೈತ್ರಾ ಕೊಟ್ಟೂರು ಅವರ ಮನೆ ಬಳಿ ಬಂದು ತಗಾದೆ ತೆಗೆದಿದ್ದಾರೆ. ಬಲವಂತವಾಗಿ ಸಂಘಟನೆಗಳ ಜೊತೆಗೂಡಿ ತಮ್ಮ ಮಗನನ್ನ ಕೂಡಿಹಾಕಿ ದೇಗುಲದಲ್ಲಿ ಮದುವೆ ಮಾಡಿಕೊಂಡಿರುವುದಾಗಿ ನಾಗಾರ್ಜುನನ ಕುಟುಂಬಸ್ಥರು ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.