ಪವರ್ ಸ್ಟಾರ್ ಪುನೀತ್ ರಾಜ್ ಅಭಿನಯದ ಬಹುನಿರೀಕ್ಷಿತ ಜೇಮ್ಸ್ ಸಿನಿಮಾ ಮಾರ್ಚ್ 17ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಸಕಲ ಸಿದ್ಧತೆ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಚಿತ್ರಮಂದಿರಗಳ ಮುಂದೆ ಅಪ್ಪು ಕಟೌಟ್ಸ್ಗಳನ್ನು ನಿಲ್ಲಿಸುವ ಕಾರ್ಯ ಭರದಿಂದ ಸಾಗುತ್ತಿದೆ.
ಈಗಾಗಲೇ ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಕಟೌಟ್ಗಳು ತಲೆ ಎತ್ತಿವೆ. ಕಮಾಲನಗರದ ವೀರಭದ್ರೇಶ್ವರ ಥಿಯೇಟರ್ ಮುಂದೆ ಪುನೀತ್ ಕಟೌಟ್ ಜೊತೆ ರಾಜ್ ಕುಮಾರ್ ಹಾಗೂ ಪಾರ್ವತಮ್ಮ ಅವರ ಕಟೌಟ್ಗಳು ರಾರಾಜಿಸುತ್ತಿವೆ. ವಿಶೇಷವಾಗಿ ಜೇಮ್ಸ್ ಸಿನಿಮಾದ ವಿವಿಧ ಅವತಾರಗಳು ಕಣ್ಮನ ಸೆಳೆಯುತ್ತಿವೆ.
ಶಿವಣ್ಣ ಅಭಿಮಾನಿಗಳ ಸಂಘ, ಪುನೀತ್ ಅಭಿಮಾನಿಗಳು, ಅಪ್ಪು ಯೂತ್ ಬಿಗ್ರೇಡ್ ಅಭಿಮಾನಿಗಳು ಮಾಗಡಿ ರಸ್ತೆಯಲ್ಲಿರೋ ವೀರೇಶ್ ಥಿಯೇಟರ್ ಮುಂಭಾಗ ಅಪ್ಪು ಅವರ ಬರೋಬ್ಬರಿ 30 ಕಟೌಟ್ಗಳನ್ನು ಹಾಕುವ ಮೂಲಕ ದಾಖಲೆ ಬರೆದಿದ್ದಾರೆ.
![Actor Puneeth Raj Kumar Cutouts in front of cinema theatres](https://etvbharatimages.akamaized.net/etvbharat/prod-images/14708960_548_14708960_1647048284173.png)
ರಾಜವಂಶದ ಅಭಿಮಾನಿಗಳು, ಪುನೀತ್ ಅಭಿನಯದ ಅಪ್ಪು ಸಿನಿಮಾದಿಂದ ಹಿಡಿದು ಜೇಮ್ಸ್ ಸಿನಿಮಾವರೆಗೂ ನಟಿಸಿರೋ ಎಲ್ಲಾ ಸಿನಿಮಾದ ಹೆಸರಲ್ಲಿ ಕಟೌಟ್ಸ್ ನಿಲ್ಲಿಸುವ ಮೂಲಕ ಚಿತ್ರರಂಗದಲ್ಲಿ ರೆಕಾರ್ಡ್ ಮಾಡುತ್ತಿದ್ದಾರೆ.
![Actor Puneeth Raj Kumar Cutouts in front of cinema theatres](https://etvbharatimages.akamaized.net/etvbharat/prod-images/14708960_thum.jpg)
ವೀರೇಶ್ ಚಿತ್ರಮಂದಿರದ ಮುಂಭಾಗ ಕಟೌಟ್ಸ್ಗಳನ್ನು ನಿಲ್ಲಿಸುವ ಕೆಲಸ ಭರದಿಂದ ಸಾಗುತ್ತಿದೆ. ಈಗಾಗಲೇ ಅಪ್ಪು, ಅಭಿ, ವೀರ ಕನ್ನಡಿಗ, ಮೌರ್ಯ, ರಾಮ್,ಜಾಕಿ, ಹುಡುಗರು, ಅಣ್ಣಾಬಾಂಡ್, ಯಾರೇ ಕೂಗಾಡಲಿ, ನಿನ್ನಿಂದಲೇ, ಹೀಗೆ ಪವರ್ ಸ್ಟಾರ್ ಅಭಿನಯದ ಎಲ್ಲಾ ಚಿತ್ರಗಳ ಕಟೌಟ್ಸ್ ಚಿತ್ರಮಂದಿರದ ಮುಂದೆ ರಾರಾಜಿಸುತ್ತಿವೆ. ಈ ಎಲ್ಲಾ ಖರ್ಚು ವೆಚ್ಚವನ್ನು ಪುನೀತ್ ಅಭಿಮಾನಿ ಆನಂದ್ ಹಾಗೂ ರಾಜವಂಶದ ಅಭಿಮಾನಿಗಳು ವಹಿಸಿಕೊಂಡಿದ್ದಾರೆ.
ಇನ್ನು ಜೇಮ್ಸ್ ಬಿಡುಗಡೆ ದಿನ ಅಪ್ಪು ಕಟೌಟ್ಸ್ಗಳಿಗೆ ಹೆಲಿಕ್ಯಾಪ್ಟರ್ ಮೂಲಕ ಹೂ ಮಳೆ ಸುರಿಸಲು ರಾಜವಂಶದ ಅಭಿಮಾನಿಗಳು ತೀರ್ಮಾನಿಸಿದ್ದಾರೆ. ಅಗಲಿದ ದೊಡ್ಮನೆ ಕುಡಿಗೆ ಗೌರವ ಸಲ್ಲಿಸಲು ಮುಂದಾಗಿದ್ದಾರೆ.