ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ 'ಆ ದೃಶ್ಯ' ಇಂದು ರಾಜ್ಯಾದ್ಯಂತ ಸುಮಾರು 180 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ನಿನ್ನೆ ಚಿತ್ರತಂಡ ಸೆಲಬ್ರಿಟಿಗಳಿಗಾಗಿ ವಿಶೇಷ ಪ್ರೀಮಿಯರ್ ಶೋ ಆಯೋಜಿಸಿತ್ತು. ಸ್ಯಾಂಡಲ್ವುಡ್ನ ನಟಿಯರು ಹಾಗೂ ನಿರ್ದೇಶಕರು ಈ ಶೋಗೆ ಆಗಮಿಸಿ ಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಶೋಗೆ ಕ್ರೇಜಿಸ್ಟಾರ್ ರವಿಚಂದ್ರನ್, ತಮ್ಮ ಪುತ್ರರಾದ ಮನೋರಂಜನ್ ಹಾಗೂ ವಿಕ್ರಂ ಜೊತೆ ಆಗಮಿಸಿ ಸಿನಿಮಾ ನೋಡಿ ಎಂಜಾಯ್ ಮಾಡಿದರು. ಸಿನಿಮಾ ನೋಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕ್ರೇಜಿಸ್ಟಾರ್, ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ನೋಡಬೇಕಾದರೆ ನಮ್ಮಲ್ಲಿ ಒಂದು ಕುತೂಹಲ ಮೂಡಬೇಕು. ಸೀಟಿನ ತುದಿಯಲ್ಲಿ ಕುಳಿತು ನೋಡುವ ಹಾಗೆ ಈ ಚಿತ್ರ ಮೂಡಿ ಬಂದಿದೆ. ಅಲ್ಲದೆ ಕ್ಲೈಮ್ಯಾಕ್ಸ್ನಲ್ಲಿ ಸಾಮಾನ್ಯವಾಗಿ ಇಂತಹ ಚಿತ್ರಗಳಲ್ಲಿ ಯಾರೂ ಹಾಡನ್ನು ಸೇರಿಸುವುದಿಲ್ಲ. ಆದರೆ ಈ ಚಿತ್ರದಲ್ಲಿ ನಿರ್ದೇಶಕರು ಆ ಪ್ರಯೋಗ ಮಾಡಿದ್ದಾರೆ. ಕ್ಲೈಮಾಕ್ಸ್ ನಲ್ಲಿ ಆ ಹಾಡು ಬರುವಾಗ ಎಲ್ಲರೂ ಎದ್ದು ಹೋಗುತ್ತಾರೆ ಎಂದುಕೊಂಡಿದ್ದೆ. ಆದರೆ ಯಾರೂ ಕೂಡಾ ಎದ್ದು ಹೋಗದೆ ಚಿತ್ರವನ್ನು ನೋಡಿದರು. ನಮ್ಮ ಪ್ರಯೋಗ ವರ್ಕೌಟ್ ಆಗಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಕ್ರೇಜಿಸ್ಟಾರ್ ಹೇಳಿದರು.
![Aa Drushya premiere show, ಆ ದೃಶ್ಯ ಪ್ರೀಮಿಯರ್ ಶೋ](https://etvbharatimages.akamaized.net/etvbharat/prod-images/4998309_adrishya2.jpg)
ಈ ಚಿತ್ರದಲ್ಲಿ ನಿರ್ದೇಶಕ, ನಿರ್ಮಾಪಕರು ಸೇರಿ ನನ್ನನ್ನು ಬಹಳ ಯಂಗ್ ಆಗಿ ತೋರಿಸಿದ್ದಾರೆ. ಚಿತ್ರದಲ್ಲಿ ನಾನು ಹೇಗೆ ಕಾಣುತ್ತಿದ್ದೇನೆ ಎಂಬುದನ್ನು ನೋಡಲು ಇಂದು ಇಲ್ಲಿಗೆ ಬಂದೆ. ಸಿನಿಮಾ ನೋಡಿದ ಮೇಲೆ ನನಗೂ ತೃಪ್ತಿಯಾಯಿತು ಎಂದು ಕ್ರೇಜಿಸ್ಟಾರ್ 'ಆ ದೃಶ್ಯ' ಚಿತ್ರದ ಬಗ್ಗೆ ಹೇಳಿದರು. ಈ ಚಿತ್ರವನ್ನು 'ಜಿಗರ್ಥಂಡ' ಸಿನಿಮಾಗೆ ನಿರ್ದೇಶಿಸಿದ್ದ ಶಿವಗಣೇಶ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರ ಯಶಸ್ಸಿನ ಹಾದಿಯಲ್ಲಿ ಸಾಗಲಿದೆಯೇ ಎಂಬುದನ್ನು ಕಾದು ನೋಡಬೇಕು.
![Aa Drushya movie released today,ಆ ದೃಶ್ಯ ಇಂದು ಬಿಡುಗಡೆ](https://etvbharatimages.akamaized.net/etvbharat/prod-images/4998309_a-drishya.jpg)