ಈ ವಾರ 5 ಕನ್ನಡ ಸಿನಿಮಾಗಳು ತೆರೆ ಕಾಣುತ್ತಿವೆ. ಈಗ ಕನ್ನಡ ಸಿನಿಮಾಗಳು ಪರಭಾಷಾ ಸಿನಿಮಾಗಳ ಮುಂದೆ ಗೆಲುವು ಸಾಧಿಸಬೇಕಿದೆ. ಒಂದು ವರ್ಷದಲ್ಲಿ ಸುಮಾರು 1,000 ಸಿನಿಮಾಗಳು ರಾಜ್ಯದಲ್ಲಿ ಬಿಡುಗಡೆಯಾದರೆ ಅವುಗಳಲ್ಲಿ 200 ಕನ್ನಡ ಸಿನಿಮಾಗಳು ಹಾಗೂ 800 ಪರಭಾಷಾ ಚಿತ್ರಗಳಾಗಿರುತ್ತವೆ. ಇಂತಹ ಪರಿಸ್ಥಿತಿ ಬೇರಾವ ರಾಜ್ಯದಲ್ಲೂ ಇಲ್ಲ ಎಂಬುದು ಎಲ್ಲರಿಗೂ ತಿಳಿದ ಸಂಗತಿ.
ಆಪರೇಷನ್ ನಕ್ಷತ್ರ
ಯಜ್ಞಾಶೆಟ್ಟಿ ಹಾಗೂ ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಆಪರೇಷನ್ ನಕ್ಷತ್ರ' ಈ ವಾರ ಬಿಡುಗಡೆಯಾಗುತ್ತಿದೆ. ಫೈವ್ಸ್ಟಾರ್ ಫಿಲಮ್ಸ್ ಬ್ಯಾನರ್ ಅಡಿ ತಯಾರಾಗುತ್ತಿರುವ ಈ ಸಿನಿಮಾ ಥ್ರಿಲ್ಲರ್ ಕಥಾ ವಸ್ತು ಹೊಂದಿದೆ. ನಂದಕುಮಾರ್. ಎನ್ , ಅರವಿಂದ್ ಮೂರ್ತಿ, ಟಿ.ಎಸ್.ರಾಧಾಕೃಷ್ಣ ಹಾಗೂ ಸಿ.ಎಸ್.ಕಿಶೋರ್ ಮೇಗಳಮನೆ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಿತ್ರದ ನಿರ್ದೇಶಕ ಮಧುಸೂಧನ್. ನಾವು ಯಾರಿಗಾದರೂ ಮೋಸ ಮಾಡಿದರೆ ನಮ್ಮ ಬೆನ್ನ ಹಿಂದೆ ನಮಗೆ ಮೋಸ ಮಾಡುವವರು ಕಾಯುತ್ತಾ ಇರುತ್ತಾರೆ ಎಂಬ ವಿಚಾರವನ್ನು ನಿರ್ದೇಶಕ ಈ ಚಿತ್ರದ ಮೂಲಕ ಹೇಳಲು ಹೊರಟಿದ್ದಾರೆ. ಪತ್ರಕರ್ತ ವಿಜಯ ಭರಮಸಾಗರ ಈ ಚಿತ್ರಕ್ಕೆ ಗೀತೆಗಳನ್ನು ಬರೆದಿದ್ದಾರೆ. ಅರ್ಜುನ್ ಕಿಟ್ಟಿ ಸಂಕಲನ, ಅಲ್ಟಿಮೇಟ್ ಶಿವು ಸಾಹಸ, ಕಂಬಿ ರಾಜು ನೃತ್ಯ ನಿರ್ದೇಶನ ಇದೆ.
ನಿರಂಜನ್ ಒಡೆಯರ್, ದೀಪಕ್ ರಾಜ್ ಶೆಟ್ಟಿ, ಶ್ರೀನಿವಾಸ ಪ್ರಭು, ಗೋವಿಂದೇಗೌಡ, ವಿಕ್ಟರಿ ವಾಸು, ಪ್ರಶಾಂತ್ ನಟನ, ವಿಜಯಲಕ್ಷ್ಮಿ, ಅರವಿಂದ್ ಮೂರ್ತಿ ಹಾಗೂ ಇತರರು ತಾರಾಗಣದಲ್ಲಿದ್ದಾರೆ.
ಯಾನ
ವಿಜಯಲಕ್ಷ್ಮಿ ಸಿಂಗ್ ಹಾಗೂ ಜೈ ಜಗದೀಶ್ ದಂಪತಿಯ ಮೂವರು ಪುತ್ರಿಯರು ನಟಿಸಿರುವ ಚೊಚ್ಚಲ ಸಿನಿಮಾ. ಈ ಮೂಲಕ ಶಂಕರ್ ಸಿಂಗ್ ಹಾಗೂ ಪ್ರತಿಮಾದೇವಿ ಅವರ ಮೂರನೇ ತಲೆಮಾರು ಸ್ಯಾಂಡಲ್ವುಡ್ಗೆ ಆಗಮಿಸಿದೆ. ವೈಸಿರಿ, ವೈಭವಿ, ವೈನಿಧಿ ಈ ಮೂವರೂ ನಟಿಯರು ಯಾನ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಮೂವರು ನಾಯಕಿಯರ ಜೊತೆ ರಂಗಭೂಮಿ ಹಾಗೂ ಹಿರಿಯ ನಟ ಶಶಿಕುಮಾರ್ (ಹೀರೋ ಶಶಿಕುಮಾರ್ ಅಲ್ಲ) ಪುತ್ರ ಸುಮುಖ, ಚಕ್ರವರ್ತಿ ಹಾಗೂ ಅಭಿಷೇಕ್ ಕೂಡಾ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.
ದುಬೈನ ಹರೀಶ್ ಷೆರೀಗರ್ ಹಾಗೂ ಶರ್ಮಿಳ ಷೆರೀಗರ್ ಐ ಎಂಟರ್ಟೈನ್ಮೆಂಟ್ ಹಾಗೂ ಅಕ್ಮೆ ಮೂವೀಸ್ ಇಂಟರ್ನ್ಯಾಷನಲ್ ಅಡಿಯಲ್ಲಿ ಸಿನಿಮಾವನ್ನು ನಿರ್ಮಿಸಿದ್ದಾರೆ. ಶ್ರೀಮತಿ ವಿಜಯಲಕ್ಷ್ಮಿ ಸಿಂಗ್ ಅವರೇ ಮಕ್ಕಳ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಬಹಳ ವರ್ಷಗಳ ನಂತರ ಅನಂತ್ನಾಗ್ ಹಾಗೂ ಸುಹಾಸಿನಿ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಸಾಧುಕೋಕಿಲ, ರಂಗಾಯಣ ರಘು, ಚಿಕ್ಕಣ್ಣ, ರಾಮಕೃಷ್ಣ, ಸುಂದರ್ ರಾಜ್, ವೀಣಾ ಸುಂದರ್, ಎಂ.ಎನ್. ಲಕ್ಷ್ಮಿದೇವಿ ಹಾಗೂ ಇತರರು ನಟಿಸಿದ್ದಾರೆ.
![sudharani](https://etvbharatimages.akamaized.net/etvbharat/prod-images/3809890_chitrakata.jpg)
ಚಿತ್ರಕಥಾ
ಸಿನಿಮಾದೊಳಗೊಂದು ಸಿನಿಮಾ ಈ 'ಚಿತ್ರಕಥಾ'. ಜಾಜಿ ಪ್ರೊಡಕ್ಷನ್ ಅಡಿಯಲ್ಲಿ ಪ್ರಜ್ವಲ್ ಎಂ. ರಾಜ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಯಶಸ್ವಿ ಬಾಲಾದಿತ್ಯ ನಿರ್ದೇಶಿಸಿದ್ದಾರೆ. ಚೇತನ್ ಕುಮಾರ್ ಸಂಗೀತ, ತನ್ವೀಕ್ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ, ರಘು ಪ್ರವೀಣ್ ಕೃಷ್ಣಮೂರ್ತಿ ಕಲಾ ನಿರ್ದೇಶನ ಮಾಡಿದ್ದಾರೆ. ಸುಜಿತ್ ರಾಥೋಡ್, ಸುಧಾರಾಣಿ, ದಿಲೀಪ್ ರಾಜ್, ಬಿ.ಜಯಶ್ರೀ, ತಬಲಾ ನಾಣಿ, ಅನುಷಾ ರಾವ್ ಹಾಗೂ ಇತರರು ಚಿತ್ರದ ತಾರಾಗಣದಲ್ಲಿದ್ದಾರೆ.
![full tight](https://etvbharatimages.akamaized.net/etvbharat/prod-images/full-tight-pyathe---slg-puttanna1562817063465-9_1107email_1562817074_513.jpg)
ಫುಲ್ಟೈಟ್ ಪ್ಯಾತೆ
ಬ್ರದರ್ಸ್ ಪಿಕ್ಚರ್ಸ್ ಹೌಸ್ ಅಡಿಯಲ್ಲಿ ತಯಾರಾಗಿರುವ ‘ಫುಲ್ ಟೈಟ್ ಪ್ಯಾತೆ’ ಕನ್ನಡ ಸಿನಿಮಾ ಇದೇ ಶುಕ್ರವಾರ ಬಿಡುಗಡೆ ಆಗುತ್ತಿದೆ. ಮದ್ಯಪಾನದಿಂದ ಆಗುವ ಅನಾಹುತವನ್ನು ಈ ಚಿತ್ರದಲ್ಲಿ ಹೇಳಲಾಗಿದೆ. 'ತಿಥಿ' ಸಿನಿಮಾದಂತೆ ಪಕ್ಕಾ ಮಂಡ್ಯ ಶೈಲಿಯಲ್ಲಿ ಈ ಸಿನಿಮಾವನ್ನು ಮಾಡಲಾಗಿದೆ. ವೈಜ್ಯನಾಥ್ ಬಿರಾದರ್ ತಂದೆ ಪಾತ್ರದಲ್ಲಿ ನಟಿಸಿದ್ದರೆ ನಿರ್ದೇಶಕ ಹಾಗೂ ನಿರ್ಮಾಪಕ ಎಸ್.ಎಲ್.ಜಿ ಪುಟ್ಟಣ್ಣ ಮಗನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮಾನಸ ಗೌಡ, ಶಿವರಾಮ್, ಸೂರ್ಯತೇಜ, ಎಂ.ಎಂ. ಮುರುಗ, ಅಜಯ್ ಕೃಷ್ಣಪ್ಪ, ಗಿರೀಶ್ ರಾಜು, ಆನಂದ್, ಸೈನಗ, ಬೇಬಿ ಪ್ರಾಪ್ತಿ ಹಾಗೂ ಇನ್ನಿತರರು ಚಿತ್ರದ ತಾರಾಗಣದಲ್ಲಿದ್ದಾರೆ.
![inti nimma baira](https://etvbharatimages.akamaized.net/etvbharat/prod-images/inti-nimma-byra-poster1562817063471-99_1107email_1562817074_104.jpg)
ಇಂತಿ ನಿಮ್ಮ ಬೈರಾ
ಕೆ.ಜೆ. ಚಿಕ್ಕು ನಿರ್ದೇಶನದ ಎಸ್.ಎಸ್.ಕೆ.ಬಿ ಪ್ರೊಡಕ್ಷನ್ ಅಡಿಯಲ್ಲಿ ವೆಂಕಟೇಶ್ ಕುಮಾರ್ ನಿರ್ಮಾಣ ಮಾಡಿರುವ ಚಿತ್ರ ಈ ವಾರ ಬಿಡುಗಡೆಗೆ ತಯಾರಿದೆ. ಇದು ಕೂಡಾ ಲವ್ ಸ್ಟೋರಿ. ಸಂತೋಷ್ ಪಾಂಡಿಯನ್ ಛಾಯಾಗ್ರಹಣ, ಎಸ್.ನಾಗು ಸಂಗೀತ, ಕವಿರಾಜ್ ಹಾಗೂ ನಾಗೇಂದ್ರ ಪ್ರಸಾದ್ ಹಾಡುಗಳು, ಕಿರಣ್ ಕುಮಾರ್ ಸಂಕಲನ, ಕನಕ ಕಲಾ ನಿರ್ದೇಶನ ಸಿನಿಮಾಕ್ಕಿದೆ. ಆರ್ಯನ್ ವೆಂಕಟೇಶ್, ಪ್ರಗತಿ, ಬೆಂಗಳೂರು ನಾಗೇಶ್, ಸುನೇತ್ರ ಪಂಡಿತ್, ಸಂಜು, ಬಸಯ್ಯ, ಅಪೂರ್ವ, ಅಂಜನಪ್ಪ, ವಠಾರ ಮಲ್ಲೇಶ್, ರಘು ರಾಮನಕೊಪ್ಪ, ಗಿರೀಶ್ ಹಾಗೂ ಇತರರು ತಾರಾಗಣದಲ್ಲಿದ್ದಾರೆ.