ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ 'ಡಿಜಿಟಲ್ ಇಂಡಿಯಾ' ಕನಸಿನ ಭಾಗವಾದ 5G ತಂತ್ರಜ್ಞಾನದ ವಿರುದ್ಧ ಭಾರತದಲ್ಲಿ ಕೆಲವರು ಧ್ವನಿ ಎತ್ತಿದ್ದಾರೆ. ಅಲ್ಲದೇ 5G ನೆಟ್ವರ್ಕ್ನಿಂದಲೇ ದೇಶದಲ್ಲಿ ಕೊರೊನಾ ವೈರಸ್ ವೇಗವಾಗಿ ಹರಡುತ್ತಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದರೆ ಇದೆಲ್ಲ ಕೇವಲ ಊಹಾಪೋಹ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಕೋವಿಡ್ಗೂ 5G ತಂತ್ರಜ್ಞಾನಕ್ಕೂ ಸಂಬಂಧವಿರುವ ಬಗ್ಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಪ್ರಮುಖ ವಿಚಾರವೆಂದರೆ ಭಾರತದಲ್ಲಿ 5G ನೆಟ್ವರ್ಕ್ ಪರೀಕ್ಷೆಗಳೇ ಇನ್ನೂ ಆರಂಭವಾಗಿಲ್ಲ. ಇವೆಲ್ಲ ಊಹಾಪೋಹಗಳು. ಇದಕ್ಕೆ ಬೆಲೆ ಕೊಡದೆ ಕೊರೊನಾ ವಿರುದ್ಧ ಹೋರಾಡಲು ಲಸಿಕೆ ಹಾಕಿಸಿಕೊಳ್ಳಿ. ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಡಿರುವ ಸುಳ್ಳು ಮಾಹಿತಿ ಮತ್ತು ವದಂತಿಗಳಿಂದ ದಾರಿ ತಪ್ಪಬೇಡಿ. ಇದರ ಬಗ್ಗೆ ಎಚ್ಚರದಿಂದಿರಿ ಎಂದು ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರಾಂಗ ಸಚಿವಾಲಯದಡಿಯಲ್ಲಿ ಬರುವ 'ಪ್ರೆಸ್ ಇನ್ಫರ್ಮೇಷನ್ ಬ್ಯೂರೋ' (PIB) ಸುದ್ದಿ ಸಂಸ್ಥೆಯು ತಿಳಿಸಿದೆ.
ಇದನ್ನೂ ಓದಿ: 5ಜಿ ಅನುಷ್ಠಾನ: ನಟಿ ಜೂಹಿ ಚಾವ್ಲಾಗೆ 20 ಲಕ್ಷ ರೂ. ದಂಡ ವಿಧಿಸಿದ ದೆಹಲಿ ಹೈಕೋರ್ಟ್..!
ಏನಿದು 5G ತಂತ್ರಜ್ಞಾನ?
5ಜಿ ಐದನೇ ತಲೆಮಾರಿನ ಮೊಬೈಲ್ ಬ್ರಾಡ್ಬ್ಯಾಂಡ್ ನೆಟ್ವರ್ಕ್ ಆಗಿದ್ದು, ಅತೀ ವೇಗವಾಗಿ ಸಂವಹನ ನಡೆಸಬಹುದಾಗಿದೆ. 5G ಗರಿಷ್ಠ ನೆಟ್ವರ್ಕ್ ಡೇಟಾವು ಪ್ರತಿ ಸೆಕೆಂಡ್ಗೆ 2 ರಿಂದ 20 ಗಿಗಾಬೈಟ್ ಇರಲಿದೆ. ಅಮೆರಿಕ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಈ ತಂತ್ರಜ್ಞಾನವನ್ನು ಹೊಂದಿವೆ. ಕೊರೊನಾ ವೈರಸ್ ಹೀಗೆ ರೇಡಿಯೋ ತರಂಗಗಳಿಂದ ಹರಡುವುದಿಲ್ಲ ಎಂದು ಅನೇಕ ತಂತ್ರಜ್ಞರು ಹೇಳುತ್ತಾ ಬಂದಿದ್ದಾರೆ.
ಇತ್ತೀಚೆಗಷ್ಟೇ ನಟಿ ಜೂಹಿ ಚಾವ್ಲಾ ಅವರು 5G ತಂತ್ರಜ್ಞಾನದಿಂದಾಗಿ ಪರಿಸರ, ಪ್ರಾಣಿ, ಗರ್ಭಿಣಿ-ಮಕ್ಕಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಇದರ ಅನುಷ್ಠಾನದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ದೆಹಲಿ ಹೈಕೋಟ್ 20 ಲಕ್ಷ ರೂ. ದಂಡ ವಿಧಿಸಿತ್ತು.