ನವದೆಹಲಿ : ಸ್ಯಾಮ್‌ಸಂಗ್ ಕಂಪನಿಯು ತನ್ನ ಇತ್ತೀಚಿನ ಗ್ಯಾಲಕ್ಸಿ M14 5G ಸ್ಮಾರ್ಟ್‌ಫೋನ್ ಅನ್ನು ಏಪ್ರಿಲ್ 17 ರಂದು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳಿಂದ ಹೊಸ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದು. ಗ್ಯಾಲಕ್ಸಿ M14 50MP ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್, 6000 mAh ಬ್ಯಾಟರಿ ಮತ್ತು 5nm Exynos 1330 ಪ್ರೊಸೆಸರ್‌ನಂತಹ ಸೆಗ್ಮೆಂಟ್ ಲೀಡಿಂಗ್ ವೈಶಿಷ್ಟ್ಯಗಳನ್ನು ಹೊಂದಿದೆ. 6000 mAh ಸಾಮರ್ಥ್ಯದ ಬ್ಯಾಟರಿಯನ್ನು ಒಂದು ಬಾರಿ ಚಾರ್ಜ್ ಮಾಡಿದರೆ ಎರಡು ದಿನಗಳವರೆಗೆ ಬಾಳಿಕೆ ಬರುತ್ತದೆ. ಬಳಕೆದಾರರು ಬ್ಯಾಟರಿಯ ಬಗ್ಗೆ ಚಿಂತಿಸದೆ ತಡೆರಹಿತವಾಗಿ ಫೋನ್ ಬಳಸಬಹುದು ಎಂದು ಕಂಪನಿ ಹೇಳಿದೆ. ಇದಲ್ಲದೆ 5nm Exynos 1330 ಪ್ರೊಸೆಸರ್ ಇರುವುದರಿಂದ ಬಳಕೆದಾರರು ಸುಲಭವಾಗಿ ಮಿಂಚಿನ ವೇಗದಲ್ಲಿ ಮಲ್ಟಿಟಾಸ್ಕ್ ಮಾಡಲು ಸಾಧ್ಯವಾಗಲಿದೆ.
ಗ್ಯಾಲಕ್ಸಿ M14 5G ಸ್ಮಾರ್ಟ್‌ಫೋನ್ ಹದಿಮೂರು 5G ಬ್ಯಾಂಡ್‌ಗಳನ್ನು ಬೆಂಬಲಿಸುತ್ತದೆ ಮತ್ತು ಅತ್ಯುತ್ತಮ ಸಂಪರ್ಕ ಮತ್ತು ಉತ್ತಮ 5G ಅನುಭವವನ್ನು ನೀಡುತ್ತದೆ. ಇದಲ್ಲದೆ, ಗ್ಯಾಲಕ್ಸಿ M14 ಸ್ಯಾಮ್‌ಸಂಗ್ ನಾಕ್ಸ್, ವಾಯ್ಸ್ ಫೋಕಸ್, ಸ್ಯಾಮ್‌ಸಂಗ್ ವಾಲೆಟ್ ಮತ್ತು ಇನ್ನೂ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿರುವ ಸುರಕ್ಷಿತ ಫೋಲ್ಡರ್ ಅನ್ನು ಬೆಂಬಲಿಸುತ್ತದೆ. ಇದು ಸ್ಯಾಮ್‌ಸಂಗ್ ಒನ್ ಯುಐನ ವಿಶಿಷ್ಟ ಲಕ್ಷಣಗಳಾಗಿವೆ ಎಂದು ಕಂಪನಿ ತಿಳಿಸಿದೆ. ಬಳಕೆದಾರರು ಇತ್ತೀಚಿನ ವೈಶಿಷ್ಟ್ಯಗಳನ್ನು ಆನಂದಿಸಲು ಮತ್ತು ಭದ್ರತಾ ಅಪಾಯಗಳಿಂದ ರಕ್ಷಿಸಿಕೊಳ್ಳಲು ಅನುವಾಗುವಂತೆ ಕಂಪನಿಯು ಎರಡು ಜನರೇಶನ್ OS ಅಪ್‌ಗ್ರೇಡ್‌ಗಳವರೆಗೆ ಮತ್ತು ನಾಲ್ಕು ವರ್ಷಗಳವರೆಗೆ ಸೆಕ್ಯೂರಿಟಿ ಅಪ್ಡೇಟ್ ನೀಡಲಿದೆ ಎಂದು ಹೇಳಿದೆ.
ದಕ್ಷಿಣ ಕೊರಿಯಾದ ಕಂಪನಿಯಾಗಿರುವ ಸ್ಯಾಮ್‌ಸಂಗ್ ಇದು ಎಲೆಕ್ಟ್ರಾನಿಕ್ ಸಾಧನಗಳ ವಿಶ್ವದ ಅತಿದೊಡ್ಡ ಉತ್ಪಾದಕರಲ್ಲಿ ಒಂದಾಗಿದೆ. ಸ್ಯಾಮ್‌ಸಂಗ್ ಉಪಕರಣಗಳು, ಡಿಜಿಟಲ್ ಮಾಧ್ಯಮ ಸಾಧನಗಳು, ಸೆಮಿಕಂಡಕ್ಟರ್‌ಗಳು, ಮೆಮೊರಿ ಚಿಪ್‌ಗಳು ಮತ್ತು ಇಂಟಿಗ್ರೇಟೆಡ್ ಸಿಸ್ಟಮ್‌ಗಳನ್ನು ಒಳಗೊಂಡಂತೆ ವಿವಿಧ ರೀತಿಯ ಗ್ರಾಹಕ ಮತ್ತು ಉದ್ಯಮ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಪರಿಣತಿ ಹೊಂದಿದೆ. ಇದು ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರು ಗಳಿಸಿದ ಕಂಪನಿಗಳಲ್ಲಿ ಒಂದಾಗಿದೆ ಮತ್ತು ದಕ್ಷಿಣ ಕೊರಿಯಾದ ಒಟ್ಟು ರಫ್ತುಗಳಲ್ಲಿ ಐದನೇ ಒಂದು ಭಾಗವನ್ನು ಉತ್ಪಾದಿಸುತ್ತದೆ.
ಸ್ಯಾಮ್ಸಂಗ್ ಅನ್ನು ಮಾರ್ಚ್ 1, 1938 ರಂದು ಲೀ ಬೈಯುಂಗ್-ಚುಲ್ ಅವರು ಕಿರಾಣಿ ವ್ಯಾಪಾರದ ಅಂಗಡಿಯಾಗಿ ಸ್ಥಾಪಿಸಿದ್ದರು. ಅವರು ಕೊರಿಯಾದ ಟೇಗುದಲ್ಲಿ ತಮ್ಮ ವ್ಯಾಪಾರವನ್ನು ಪ್ರಾರಂಭಿಸಿದರು. ನೂಡಲ್ಸ್ ಮತ್ತು ಇತರ ಸರಕುಗಳನ್ನು ನಗರದಲ್ಲಿ ಮತ್ತು ಸುತ್ತಮುತ್ತ ಉತ್ಪಾದಿಸಿದರು ಮತ್ತು ಅವುಗಳನ್ನು ಚೀನಾ ಮತ್ತು ಅದರ ಪ್ರಾಂತ್ಯಗಳಿಗೆ ರಫ್ತು ಮಾಡಿದರು. (ಕಂಪನಿಯ ಹೆಸರು Samsung ಎಂಬುದು ಕೊರಿಯನ್ ಭಾಷೆಯ "ಮೂರು ನಕ್ಷತ್ರಗಳು" ಎಂಬ ಶಬ್ದದಿಂದ ಬಂದಿದೆ). ಕೊರಿಯನ್ ಯುದ್ಧದ ನಂತರ ಲೀ ಸ್ಯಾಮ್ಸಂಗ್ ಅನ್ನು ಜವಳಿ ಕ್ಷೇತ್ರಕ್ಕೂ ವಿಸ್ತರಿಸಿದರು ಮತ್ತು ಕೊರಿಯಾದಲ್ಲಿ ಅತಿದೊಡ್ಡ ಉಣ್ಣೆ ಗಿರಣಿಯನ್ನು ತೆರೆದರು.
ಇದನ್ನೂ ಓದಿ : ಚೀನಾ ವಿವೋ ಕಂಪನಿಗೆ ಭಾರತದಿಂದ 10 ಲಕ್ಷ ಮೊಬೈಲ್ ರಫ್ತು ಗುರಿ