ನವದೆಹಲಿ: ವ್ಯಕ್ತಿಗಳ ಅಥವಾ ಸಂಸ್ಥೆಯ ಡೇಟಾ ಕದಿಯಲು ಅನೇಕ ಮಾಲ್‌ವೇರ್ ಅಥವಾ ಬಾಟ್‌ಗಳು ಚಾಲ್ತಿಯಲ್ಲಿವೆ. ಕನಿಷ್ಠ 6 ಲಕ್ಷ ಭಾರತೀಯರ ಡೇಟಾವನ್ನು ಕದ್ದು ಬಾಟ್ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗಿದೆ. ಅಲ್ಲದೇ ಓರ್ವ ಭಾರತೀಯನ ಡಿಜಿಟಲ್ ಗುರುತಿನ ಸರಾಸರಿ ಬೆಲೆ ಸುಮಾರು 490 ರೂಪಾಯಿ ಎಂಬ ಮಾಹಿತಿಯನ್ನು ಸೈಬರ್ - ಸೆಕ್ಯುರಿಟಿ ಸಂಶೋಧಕರು ಗುರುವಾರ ಬಹಿರಂಗಪಡಿಸಿದ್ದಾರೆ.
ಸೈಬರ್ ಸೆಕ್ಯುರಿಟಿ ಕಂಪನಿ ನಾರ್ಡ್‌ವಿಪಿಎನ್‌ನ ಸಂಶೋಧನೆಯ ಪ್ರಕಾರ, ಬಾಟ್‌ಗಳ ಮಾರುಕಟ್ಟೆಯ ಎಲ್ಲಾ ಡೇಟಾದ ಶೇ.12 ರಷ್ಟು ಭಾರತೀಯರದ್ದಾಗಿದೆ. ಪ್ರಪಂಚದಲ್ಲಿ ಭಾರತವು ಹೆಚ್ಚು ಪರಿಣಾಮ ಬೀರುವ ದೇಶವಾಗಿದೆ. ಬಾಟ್ ಮಾರುಕಟ್ಟೆಗಳು ಆನ್‌ಲೈನ್ ಮಾರುಕಟ್ಟೆ ಸ್ಥಳಗಳಾಗಿವೆ. ಹ್ಯಾಕರ್‌ಗಳು ಬೋಟ್ ಮಾಲ್‌ವೇರ್‌ನೊಂದಿಗೆ ಕದಿಯುವ ಡೇಟಾ ಮಾರಾಟ ಮಾಡಲು ಇದನ್ನು ಬಳಸುತ್ತಾರೆ.
ಡೇಟಾ ಮಾರಾಟ: ಲಾಗಿನ್ ಐಡಿ, ಕುಕೀಗಳು, ಡಿಜಿಟಲ್ ಫಿಂಗರ್ ಪ್ರಿಂಟ್‌ಗಳು, ಸ್ಕ್ರೀನ್‌ಶಾಟ್‌ಗಳು ಮತ್ತು ಇತರ ಮಾಹಿತಿಯನ್ನು ಒಳಗೊಂಡಿರುವ ಪ್ಯಾಕೆಟ್‌ಗಳಲ್ಲಿ ಡೇಟಾ ಮಾರಾಟ ಮಾಡಲಾಗುತ್ತದೆ. ಹ್ಯಾಕರ್‌ಗಳು ಡೇಟಾ ಕದಿಯುತ್ತಿರುವುದರಿಂದ ಈಗಾಗಲೇ ಜಾಗತಿಕವಾಗಿ ಐದು ಮಿಲಿಯನ್ ಜನರ ಮೇಲೆ ಪರಿಣಾಮ ಬೀರಿದೆ. ಹ್ಯಾಕರ್‌ಗಳು ವೆಬ್‌ಕ್ಯಾಮ್ ಸ್ನ್ಯಾಪ್‌ಗಳು, ಸ್ಕ್ರೀನ್‌ಶಾಟ್‌ಗಳು, ಅಪ್ ಟು ಡೇಟ್ ಲಾಗಿನ್‌ಗಳು, ಕುಕೀಗಳು ಮತ್ತು ಡಿಜಿಟಲ್ ಫಿಂಗರ್‌ಪ್ರಿಂಟ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ.
ಭಾರತೀಯರ ಡೇಟಾ 490 ರೂ.ಗೆ ಮಾರಾಟ: ಕನಿಷ್ಠ ಐದು ಮಿಲಿಯನ್ ಜನರ ಆನ್‌ಲೈನ್ ಗುರುತು ಕದ್ದು ಬಾಟ್ ಮಾರುಕಟ್ಟೆಯಲ್ಲಿ ಸರಾಸರಿ 490 ರೂ.ಗೆ ಮಾರಾಟ ಮಾಡಿದ್ದಾರೆ. ಎಲ್ಲಾ ಬಾಧಿತ ಜನರಲ್ಲಿ, 6 ಲಕ್ಷ ಜನ ಭಾರತದವರಾಗಿದ್ದಾರೆ ಎಂದು ಸಂಶೋಧಕರು ಹೇಳಿದ್ದಾರೆ.
ವಿಶ್ಲೇಷಿಸಿದ ಮಾರುಕಟ್ಟೆಗಳಲ್ಲಿ ಕನಿಷ್ಠ 26.6 ಮಿಲಿಯನ್ ಕದ್ದ ಲಾಗಿನ್‌ಗಳು ಕಂಡು ಬಂದಿವೆ. ಅವುಗಳಲ್ಲಿ 720,000 ಗೂಗಲ್ ಲಾಗಿನ್‌ಗಳು, 654,000 ಮೈಕ್ರೋಸಾಫ್ಟ್ ಲಾಗಿನ್‌ಗಳು ಮತ್ತು 647,000 ಫೇಸ್‌ಬುಕ್ ಲಾಗಿನ್ಗಳಾಗಿವೆ. ಇದರ ಜೊತೆಗೆ ಸಂಶೋಧಕರು 667 ಮಿಲಿಯನ್ ಕುಕೀಗಳು, 81 ಸಾವಿರ ಡಿಜಿಟಲ್ ಫಿಂಗರ್‌ಪ್ರಿಂಟ್‌ಗಳು, 538 ಸಾವಿರ ಸ್ವಯಂ ಭರ್ತಿ ಫಾರ್ಮ್‌ಗಳು, ಹಲವಾರು ಸಾಧನದ ಸ್ಕ್ರೀನ್‌ಶಾಟ್‌ಗಳು ಮತ್ತು ವೆಬ್‌ಕ್ಯಾಮ್ ಸ್ನ್ಯಾಪ್‌ಗಳನ್ನು ಕಂಡುಕೊಂಡಿದ್ದಾರೆ.
ಇದನ್ನೂ ಓದಿ: ಬದಲಿ ನಾವಿಗೇಷನ್ ಉಪಗ್ರಹ ಉಡಾವಣೆಗೆ ಭಾರತ ಸಜ್ಜು
"ಡಿಜಿಟಲ್ ಬಾಟ್‌ಗಳು ಹೆಚ್ಚು ಸಾಮಾನ್ಯವಾಗುತ್ತಿವೆ. ಅವು ಗ್ರಾಹಕ ಸೇವೆ, ಸರ್ಚ್ ಎಂಜಿನ್ ಆಪ್ಟಿಮೈಸೇಶನ್ ಮತ್ತು ಮನರಂಜನೆಯಂತಹ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಆದರೂ ಎಲ್ಲ ಬಾಟ್‌ಗಳು ಉತ್ತಮ ಉದ್ದೇಶಗಳನ್ನು ಪೂರೈಸುವುದಿಲ್ಲ - ಅವುಗಳಲ್ಲಿ ಹಲವು ದುರುದ್ದೇಶಪೂರಿತವಾಗಿರಬಹುದು" ಎಂದು ಭದ್ರತಾ ಸಂಶೋಧಕರು ಹೇಳಿದ್ದಾರೆ.
RedLine, Vidar, Racoon, Taurus, ಮತ್ತು AZORult ಇವು ಡೇಟಾವನ್ನು ಕದಿಯಲು ಮತ್ತು ಸಂಗ್ರಹಿಸುವ ಮಾಲ್‌ವೇರ್‌ನ ಅತ್ಯಂತ ಜನಪ್ರಿಯ ಪ್ರಕಾರಗಳಾಗಿವೆ. ಇವುಗಳಲ್ಲಿ ರೆಡ್‌ಲೈನ್ ಹೆಚ್ಚು ಪ್ರಚಲಿತವಾಗಿದೆ.