ಬೆಂಗಳೂರು: ಬರೋಬ್ಬರಿ 13 ವರ್ಷಗಳ ಬಳಿಕ ಭೂಗತ ಪಾತಕಿ ರವಿ ಪೂಜಾರಿಯ ಸಹಚರನೊಬ್ಬನನ್ನು ಸಿಸಿಬಿ ಪೊಲೀಸರು ಸೆರೆ ಹಿಡಿದಿದ್ದಾರೆ.
ಉತ್ತರ ಪ್ರದೇಶ ಮೂಲದ ಇಕ್ಲಾಕ್ ಖುರೇಶಿ ಬಂಧಿತ ಆರೋಪಿ. ಈತ 2007 ರಲ್ಲಿ ನಡೆದಿದ್ದ ತಿಲಕ್ ನಗರದ ಠಾಣಾ ವ್ಯಾಪ್ತಿಯ ಶಬನಂ ಡೆವಲಪರ್ಸ್ ಶೂಟೌಟ್ ಕೇಸ್ನಲ್ಲಿ ಭಾಗಿಯಾಗಿದ್ದ. ಶೂಟೌಟ್ ಪ್ರಕರಣದಲ್ಲಿ ರವಿ ಪೂಜಾರಿ ಪ್ರಮುಖ ಆರೋಪಿಯಾಗಿದ್ದು, ರವಿ ಪೂಜಾರಿಗೆ ಇಕ್ಲಾಕ್ ಖುರೇಶಿ ಬೇರೆ ಕಡೆಯಿಂದ ಗನ್ ತಂದುಕೊಟ್ಟಿದ್ದ. ಅರೆಸ್ಟ್ ಆಗಿ ಎರಡು ತಿಂಗಳು ಜೈಲಿನಲ್ಲಿದ್ದ. ಆದರೆ ಜಾಮೀನಿನ ಮೇಲೆ ಹೊರಬಂದಿದ್ದ ಈತ, ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಇದೀಗ ಇನ್ಸ್ಪೆಕ್ಟರ್ ಮಹಾನಂದ್ ಹಾಗೂ ತಂಡ ಖುರೇಶಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂಬಂಧ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾತನಾಡಿ, ರವಿ ಪೂಜಾರಿಯನ್ನ ಕರ್ನಾಟಕಕ್ಕೆ ಕರೆ ತರಲಾಗಿತ್ತು. ಸದ್ಯ ರವಿ ಪೂಜಾರಿ ವಿರುದ್ಧದ 6ನೇ ಕೇಸ್ ತನಿಖೆ ಮಾಡ್ತಿರುವಾಗ ಇಕ್ಲಾಕ್ ಖುರೇಶಿ ಅಪರಾಧಗಳು ಬೆಳಕಿಗೆ ಬಂದಿವೆ. 2007ರಲ್ಲಿ ರವಿ ಪೂಜಾರಿ ಹಾಗೂ ಅವನ ಗ್ಯಾಂಗ್ ಶಬನಂ ಡೆವಲಪರ್ಸ್ ಸಂಸ್ಥೆ ಮೇಲೆ ಗುಂಡಿನ ದಾಳಿ ನಡೆಸಿ ಇಬ್ಬರನ್ನು ಕೊಲೆ ಮಾಡಿದ್ದರು. ಸದ್ಯ ಖುರೇಶಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದ್ದು, ಪ್ರಕರಣದ ಇನ್ನೂ ಮೂವರು ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ತಿಳಿಸಿದ್ದಾರೆ.