ಭಟ್ಕಳ: ಅಕ್ರಮವಾಗಿ ಸಾಗುವಾನಿ ಮರದ ತುಂಡುಗಳನ್ನು ಸಾಗಿಸುವಾಗ ಭಟ್ಕಳ ವಲಯದ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದ ಘಟನೆ ಉತ್ತರಕೊಪ್ಪ ರಸ್ತೆ ಸಮೀಪ ಕಮಟೆಕೇರಿ-ಕಾಯ್ಕಿಣಿಯಲ್ಲಿ ನಡೆದಿದೆ.
ಹೊನ್ನಾವರ ವಿಭಾಗದ ಭಟ್ಕಳ ವಲಯದ ಸಿಬ್ಬಂದಿ ರಾತ್ರಿ ಗಸ್ತು ತಿರುಗುವಾಗ ಶಿರಾಲಿ ಉತ್ತರಕೊಪ್ಪ ರಸ್ತೆ ಹತ್ತಿರ ಕಮಟೆಕೇರಿ, ಕಾಯ್ಕಿಣಿಯಲ್ಲಿ ಅಕ್ರಮವಾಗಿ 60,000 ರೂ. ಬೆಲೆಬಾಳುವ ಸಾಗುವಾನಿ ಮರದ ತುಂಡುಗಳನ್ನು ಸಾಗಿಸುತ್ತಿದ್ದರು. ಈ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿ ತಡೆಯಲು ಪ್ರಯತ್ನಿಸಿದಾಗ ಆರೋಪಿಗಳು ಪರಾರಿಯಾಗಿದ್ದಾರೆ.
ವಾಹನ ಮತ್ತು ಅಕ್ರಮವಾಗಿ ವಾಹನದಲ್ಲಿ ಸಾಗಿಸುತ್ತಿದ್ದ ಸಾಗುವಾನಿ ತುಂಡುಗಳನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಹಿರಿಯ ಅಧಿಕಾರಿಗಳಾದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ನಾಯ್ಕ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುದರ್ಶನ್ ಆರ್.ಕೆ. ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಸವಿತಾ ಆರ್. ದೇವಾಡಿಗ, ಉಪ ವಲಯ ಅರಣ್ಯಾಧಿಕಾರಿ ಜಗದೀಶ ನಾಯ್ಕ ಹಾಗೂ ಶ್ರೀಕಾಂತ ಎಸ್. ಪವಾರ್ ಹಾಗೂ ಶಿರಾಲಿ ಶಾಖಾ ಸಿಬ್ಬಂದಿ ಮತ್ತು ವಾಹನ ಚಾಲಕರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.