ಬ್ಯಾಂಕಾಕ್, ಥಾಯ್ಲೆಂಡ್: ಬಿಳಿ ಮರುಭೂಮಿ ನರಿ ಮತ್ತು ರಕೂನ್ ಸೇರಿದಂತೆ ಜೀವಂತ ವನ್ಯಜೀವಿ ಕಳ್ಳಸಾಗಣೆಗೆ ಪ್ರಯತ್ನ ಮಾಡುುತ್ತಿದ್ದ ಭಾರತೀಯ ವ್ಯಕ್ತಿಯನ್ನು ಥಾಯ್ಲೆಂಡ್‌ನ ಮುಖ್ಯ ವಿಮಾನ ನಿಲ್ದಾಣದಲ್ಲಿ ಬಂಧನ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಗ್ನೇಯ ಏಷ್ಯಾದ ರಾಜ್ಯವು ವನ್ಯಜೀವಿ ಕಳ್ಳಸಾಗಾಣಿಕೆದಾರರಿಗೆ ಪ್ರಮುಖ ಸಾರಿಗೆ ಕೇಂದ್ರವಾಗಿದೆ. ಅವರು ಆಗಾಗ್ಗೆ ಚೀನಾ ಮತ್ತು ವಿಯೆಟ್ನಾಂಗೆ ಪ್ರಾಣಿಗಳನ್ನು ಮಾರಾಟ ಮಾಡುತ್ತಾರೆ. ಆದರೂ ಇತ್ತೀಚಿನ ತಿಂಗಳುಗಳು ಭಾರತಕ್ಕೆ ಕಳ್ಳಸಾಗಣೆ ಹೆಚ್ಚಳ ಕಂಡಿರುವುದು ತಿಳಿದು ಬಂದಿದೆ.
21 ವರ್ಷದ ಅಭಿಲಾಷ್ ಅಣ್ಣಾದುರಿ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಆರೋಪಿ ಅಣ್ಣಾದುರಿ ಆರು ಜಾತಿಯ 17 ಜೀವಂತ ಜೀವಿಗಳೊಂದಿಗೆ ಪತ್ತೆಯಾಗಿದ್ದಾರೆ ಎಂದು ಥಾಯ್ಲೆಂಡ್‌ನ ರಾಷ್ಟ್ರೀಯ ಉದ್ಯಾನವನಗಳು, ವನ್ಯಜೀವಿ ಮತ್ತು ಸಸ್ಯ ಸಂರಕ್ಷಣಾ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಆರೋಪಿ ಅಣ್ಣಾದುರಿ ನಡೆಸುತ್ತಿದ್ದ ಕಳ್ಳ ಸಾಗಣೆಯಲ್ಲಿ ಬಿಳಿ ಮರುಭೂಮಿ ನರಿ, ಒಂದು ರಕೂನ್, ಎರಡು ಇಗುವಾನಾಗಳು ಮತ್ತು ಒಂದು ಜೋಡಿ ಬಿಳಿ ಹೆಬ್ಬಾವುಗಳು ಕಂಡು ಬಂದಿದ್ದಾವೆ. ಅಷ್ಟೇ ಅಲ್ಲ ಇವುಗಳ ಜೊತೆಗೆ ಮೂರು ಮಾನಿಟರ್ ಹಲ್ಲಿಗಳು ಮತ್ತು ಎಂಟು ಮಾರ್ಮೊಸೆಟ್ ಕೋತಿಗಳು ಸೇರಿವೆ ಎಂದು ಪ್ರಕರಣೆ ಮೂಲಕ ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಚೆನ್ನೈಗೆ ತೆರಳುವ ಮಾರ್ಗದಲ್ಲಿ ಬ್ಯಾಂಕಾಕ್‌ನ ಸುವರ್ಣಭೂಮಿ ವಿಮಾನ ನಿಲ್ದಾಣದಲ್ಲಿ ಎಕ್ಸ್-ರೇ ಯಂತ್ರಗಳ ಮೂಲಕ ಎಲ್ಲಾ ಪ್ರಾಣಿಗಳನ್ನು ಪ್ಲಾಸ್ಟಿಕ್ ಬುಟ್ಟಿಗಳಲ್ಲಿ ಕಂಡು ಬಂದಿದ್ದಾವೆ. ಆರೋಪಿ ಇವುಗಳನ್ನು ತಿನ್ನುವ ವಸ್ತುಗಳ ಕೆಳಗೆ ಮರೆಮಾಡಲಾಗಿದ್ದು ಮತ್ತು ಲಗೇಜ್‌ಗಳಲ್ಲಿ ಪ್ಯಾಕ್ ಮಾಡಿರುವುದು ಕಂಡುಬಂದಿದೆ.
ಭಾರತಕ್ಕೆ ಪ್ರಾಣಿಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ಥಾಯ್ ಅಧಿಕಾರಿಗಳು ಬಂಧಿಸಿದ್ದಾರೆ. ಭಾರತಕ್ಕೆ ಕಳ್ಳಸಾಗಣೆ ಪ್ರಮಾಣ ಹೆಚ್ಚಾಗುತ್ತಿರುವುದರ ಬಗ್ಗೆ ತಿಳಿದು ಬಂದಿದೆ. ಇಂತಹ ಘಟನೆಗಳ ಬಗ್ಗೆ ನಿಗಾ ವಹಿಸಲಾಗುವುದು ಎಂದು ಸಂರಕ್ಷಣಾ ವಿಭಾಗದ ನಿರ್ದೇಶಕ ಪ್ರಸರ್ಟ್ ಸೋನ್ಸತಪೋರ್ನ್ಕುಲ್ ಹೇಳಿದರು.
ಜೀವಿಗಳು ಸುಮಾರು 98,000 ಬಹ್ತ್ (2,20,194 ರೂ.) ಮೌಲ್ಯದ್ದಾಗಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಆದರೆ ಪ್ರಾಣಿಗಳು ಥೈಲ್ಯಾಂಡ್‌ಗೆ ಹೇಗೆ ಬಂದವು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ನಾವು ಈ ಪ್ರಾಣಿಗಳಲ್ಲಿ ಮೈಕ್ರೋಚಿಪ್‌ಗಳನ್ನು ಕಂಡುಹಿಡಿಯಲಾಗುವುದಿಲ್ಲ. ಆದ್ದರಿಂದ ಅವು ಎಲ್ಲಿಂದ ಬರುತ್ತವೆ ಎಂದು ನಮಗೆ ತಿಳಿದಿಲ್ಲ ಎಂದು ಪ್ರಸರ್ಟ್ ಹೇಳಿದರು. ಅಣ್ಣಾದುರಿ ವಿರುದ್ಧ ವನ್ಯಜೀವಿ ಕಳ್ಳಸಾಗಣೆ ಆರೋಪ ಹೊರಿಸಲಾಗಿದ್ದು, ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ರಕ್ಷಿಸಿದ ಪ್ರಾಣಿಗಳನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ.
ಡಿಜಿಟಲ್ ಮಾಧ್ಯಮದಲ್ಲಿ ಹೆಚ್ಚುತ್ತಿರುವ ಅಕ್ರಮ ವನ್ಯಜೀವಿ ವ್ಯಾಪಾರಕ್ಕೂ ವರದಿಯು ಮಹತ್ವ ನೀಡುತ್ತದೆ. ಏಕೆಂದರೆ ಕಳ್ಳಸಾಗಣೆದಾರರು ಸಂಭಾವ್ಯ ಖರೀದಿದಾರರೊಂದಿಗೆ ಸಂಪರ್ಕ ಸಾಧಿಸಲು ಹೊಸ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಆದಾಗ್ಯೂ, ನಡೆಯುತ್ತಿರುವ ಅಕ್ರಮ ವ್ಯಾಪಾರವನ್ನು ಪರಿಹರಿಸಲು ಕಾನೂನು ಚೌಕಟ್ಟುಗಳನ್ನು ಸುಧಾರಿಸಲು ಮತ್ತು ನ್ಯಾಯಾಂಗ ಪ್ರಕ್ರಿಯೆಯನ್ನು ಬಲಪಡಿಸಲು ಕೇಂದ್ರೀಕರಿಸುವ ಬಲವಾದ ಅಪರಾಧ ನ್ಯಾಯ ವ್ಯವಸ್ಥೆ ಅಗತ್ಯವಿದೆ.
ಓದಿ: ಶಾಕಿಂಗ್ ಸಂಗತಿ: ಆಹಾರ ಸಿಗದೇ ಪ್ಲಾಸ್ಟಿಕ್ ತ್ಯಾಜ್ಯ ಸೇವನೆ.. 20 ಕಾಡಾನೆಗಳು ಸಾವು