ಟೆಲ್ ಅವೀವ್ (ಇಸ್ರೇಲ್): ಹಿಜ್ಬುಲ್ಲಾ ವಿರುದ್ಧ ಈಗಲೇ ಪೂರ್ಣ ಪ್ರಮಾಣದ ಯುದ್ಧ ಆರಂಭಿಸುವುದು ಬೇಡ ಎಂದು ಅಮೆರಿಕವು ಇಸ್ರೇಲ್ಗೆ ಖಾಸಗಿಯಾಗಿ ಒತ್ತಾಯಿಸುತ್ತಿದೆ ಎಂದು ಮೂಲಗಳು ಹೇಳಿವೆ. ಪ್ರಸ್ತುತ ಯುದ್ಧವು ಗಾಜಾ ಮೇಲೆಯೇ ಕೇಂದ್ರಿಕೃತವಾಗಿರುವಂತೆ ಮತ್ತು ಪ್ರಾದೇಶಿಕವಾಗಿ ಬೇರೆ ಕಡೆಗೆ ಹರಡದಂತೆ ವಾಶಿಂಗ್ಟನ್ ಪ್ರಯತ್ನಿಸುತ್ತಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಅಕ್ಟೋಬರ್ 7 ರಂದು 1,400 ಕ್ಕೂ ಹೆಚ್ಚು ಇಸ್ರೇಲಿಗಳನ್ನು ಕೊಂದ ಆಘಾತಕಾರಿ ಹಮಾಸ್ ದಾಳಿಯ ನಂತರ ಹಿಜ್ಬುಲ್ಲಾ ಇಸ್ರೇಲ್ನ ಉತ್ತರ ಗಡಿಯಲ್ಲಿ ದಾಳಿ ನಡೆಸುತ್ತಿರುವುದಕ್ಕೆ ಪ್ರತಿಯಾಗಿ ಇಸ್ರೇಲ್ ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ಯುಎಸ್ ಗುರುತಿಸಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಆದರೆ ಲೆಬನಾನ್ ಮೂಲದ ಹಿಜ್ಬುಲ್ಲಾ ಗುಂಪಿನ ಪುನರಾವರ್ತಿತ ದಾಳಿಗಳು ಮತ್ತು ಗಾಜಾದಿಂದ ಹಮಾಸ್ ನಡೆಸಿದ ಕ್ರೂರ ದಾಳಿಯನ್ನು ಊಹಿಸಲು ಇಸ್ರೇಲ್ ವಿಫಲವಾಗಿದೆ ಎಂಬ ಅಂಶಗಳನ್ನು ಪರಿಗಣಿಸಿರುವ ಯುಎಸ್, ಹಿಜ್ಬುಲ್ಲಾ ವಿರುದ್ಧ ಇಸ್ರೇಲ್ ಈಗಲೇ ಯುದ್ಧ ಪ್ರಾರಂಭಿಸುವುದು ಎಷ್ಟು ಸರಿ ಎಂಬ ಬಗ್ಗೆ ಪರಿಶೀಲನೆ ಮಾಡುತ್ತಿದೆ.
ಏತನ್ಮಧ್ಯೆ ಇಸ್ರೇಲ್ನ ಉತ್ತರ ಬಾಗದ ಕಡೆಯಿಂದ ಯುದ್ಧ ಪ್ರಾರಂಭಿಸದಂತೆ ಹಿಜ್ಬುಲ್ಲಾ ಮತ್ತು ಇರಾನ್ಗೆ ಖಾಸಗಿಯಾಗಿ ಮತ್ತು ಸಾರ್ವಜನಿಕವಾಗಿ ಯುಎಸ್ ಎಚ್ಚರಿಕೆ ನೀಡುತ್ತಿದೆ. ಲೆಬನಾನ್ನಲ್ಲಿ ಐಡಿಎಫ್ ಮಾಡಬಹುದಾದ ತಪ್ಪು ದೊಡ್ಡ ಯುದ್ಧಕ್ಕೆ ಕಾರಣವಾಗಬಹುದು ಎಂದು ಹೇಳಿರುವ ಅಮೆರಿಕ, ಹಿಜ್ಬುಲ್ಲಾ ಗುಂಡಿನ ದಾಳಿಗೆ ತನ್ನ ಮಿಲಿಟರಿ ಪ್ರತಿಕ್ರಿಯೆಗಳಲ್ಲಿ ಜಾಗರೂಕರಾಗಿರಬೇಕು ಎಂದು ಇಸ್ರೇಲ್ಗೆ ಎಚ್ಚರಿಕೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದಾಗ್ಯೂ ಒಂದೊಮ್ಮೆ ಹಿಜ್ಬುಲ್ಲಾ ಇಸ್ರೇಲ್ ವಿರುದ್ಧ ಯುದ್ಧ ಪ್ರಾರಂಭಿಸಿದರೆ, ಇಸ್ರೇಲ್ ಪರವಾಗಿ ಹೋರಾಡಲು ಯುಎಸ್ ಮಿಲಿಟರಿ ಇಸ್ರೇಲ್ನ ಐಡಿಎಫ್ನೊಂದಿಗೆ ಕೈ ಜೋಡಿಸಲಿದೆ ಎಂದು ಬೈಡನ್ ಸರ್ಕಾರದ ಅಧಿಕಾರಿಗಳು ಇತ್ತೀಚಿನ ದಿನಗಳಲ್ಲಿ ಇಸ್ರೇಲ್ಗೆ ಭರವಸೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಆದರೆ ಇಸ್ರೇಲ್ಗೆ ಸಂಕ್ಷಿಪ್ತ ಭೇಟಿಯ ನಂತರ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯುಎಸ್ ಅಧ್ಯಕ್ಷ ಜೋ ಬೈಡನ್, ಹಿಜ್ಬುಲ್ಲಾದೊಂದಿಗೆ ಯುದ್ಧ ಆರಂಭವಾದರೆ ತಾನು ಇಸ್ರೇಲ್ನೊಂದಿಗೆ ಸೇರುವುದಾಗಿ ಹೇಳಿಲ್ಲ ಎಂದಿದ್ದಾರೆ.
ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಸುದ್ದಿಗಾರರೊಂದಿಗೆ ಮಾತನಾಡಿ, "ಯುದ್ಧದಲ್ಲಿ ಯುಎಸ್ ಯೋಧರು ಪಾಲ್ಗೊಳ್ಳುವ ಉದ್ದೇಶವಿಲ್ಲ, ಆದರೆ ಯುಎಸ್ ತನ್ನದೇ ಆದ ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳನ್ನು ಹೊಂದಿದೆ ಮತ್ತು ನಮಗೆ ಅಗತ್ಯವಿದ್ದರೆ ನಾವು ಅವುಗಳನ್ನು ರಕ್ಷಿಸುತ್ತೇವೆ" ಎಂದು ಹೇಳಿದರು.
ಇದನ್ನೂ ಓದಿ: ಗಾಜಾ ಆಸ್ಪತ್ರೆ ಮೇಲೆ ಇಸ್ರೇಲ್ ದಾಳಿ ಮಾಡಿಲ್ಲ, ಬೇರೆ ಉಗ್ರರ ಗುಂಪಿನಿಂದ ಕೃತ್ಯ: ಅಮೆರಿಕದ ಅಧ್ಯಕ್ಷ ಜೋ ಬೈಡನ್