ಸಿಯುಡಾಡ್ ಜುವಾರೆಜ್, ಮೆಕ್ಸಿಕೋ: ಅಮೆರಿಕದ ಗಡಿಯಲ್ಲಿರುವ ಮೆಕ್ಸಿಕನ್ ನಗರದಲ್ಲಿರುವ ವಲಸಿಗರ ಬಂಧನ ಕೇಂದ್ರದಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಕನಿಷ್ಠ 39 ವಲಸಿಗರು ಸಾವನ್ನಪ್ಪಿದ್ದಾರೆ ಎಂದು ಮೆಕ್ಸಿಕೊ ಸರ್ಕಾರ ಮಂಗಳವಾರ ತಿಳಿಸಿದೆ. ಸಿಯುಡಾಡ್ ಜುವಾರೆಜ್‌ನಲ್ಲಿರುವ ರಾಷ್ಟ್ರೀಯ ವಲಸೆ ಸಂಸ್ಥೆ (ಐಎನ್‌ಎಂ) (National Migration Institute -INM) ಸೌಲಭ್ಯದಲ್ಲಿ ಮಧ್ಯರಾತ್ರಿಯ ಸ್ವಲ್ಪ ಸಮಯಕ್ಕೆ ಮೊದಲು ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯ ಸುದ್ದಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ಸಿಬ್ಬಂದಿ ಮತ್ತು ಡಜನ್‌ಗಟ್ಟಲೆ ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಬಂದವು.
ಐಎನ್‌ಎಮ್‌ನ ಪಾರ್ಕಿಂಗ್ ಸ್ಥಳದಿಂದ 12 ಮೃತ ದೇಹಗಳನ್ನು ಫೋರೆನ್ಸಿಕ್ ಸಿಬ್ಬಂದಿ ಹೊರತೆಗೆಯುವ ದೃಶ್ಯಗಳು ಕಾಣಿಸಿವೆ. ಬೆಂಕಿ ಅನಾಹುತದಲ್ಲಿ 39 ವಲಸಿಗರು ಸಾವಿಗೀಡಾಗಿರುವ ಘಟನೆಗೆ ಆಂತರಿಕ ಸಚಿವಾಲಯ ಸಂತಾಪ ಸೂಚಿಸುತ್ತದೆ ಎಂದು ಐಎನ್‌ಎಂ ಹೇಳಿಕೆಯಲ್ಲಿ ತಿಳಿಸಿದೆ. ವಲಸೆ ಬಂಧಿತರ ಕೇಂದ್ರದಲ್ಲಿ ಸುಮಾರು 70 ಜನರಿದ್ದು, ಅದರಲ್ಲಿ ಬಹುತೇಕರು ವೆನೆಜುವೆಲಾ ದೇಶದವರು ಎಂದು ಮೂಲಗಳು ಹೇಳಿವೆ. ಸ್ಥಳೀಯ ಅಧಿಕಾರಿಗಳು ಇತ್ತೀಚಿನ ದಿನಗಳಲ್ಲಿ ಹಲವಾರು ಬೀದಿ ಬದಿ ವ್ಯಾಪಾರಿಗಳನ್ನು ವಿಚಾರಣೆ ನಡೆಸಿ ಅದರಲ್ಲಿನ ಅನೇಕ ವಿದೇಶಿಯರನ್ನು ಬಂಧಿಸಿದ್ದರು. ಅವರೆಲ್ಲರನ್ನು ಇಲ್ಲಿ ಇಡಲಾಗಿತ್ತು ಎನ್ನಲಾಗಿದೆ.
ವಿನಾಗ್ಲಿ ಎಂದು ತನ್ನ ಹೆಸರು ಹೇಳಿಕೊಂಡ ವೆನೆಜುವೆಲಾದ ಮಹಿಳೆಯೊಬ್ಬರು ವಲಸೆ ಕೇಂದ್ರದ ಹೊರಗೆ ನಿಂತಿದ್ದು, ವಲಸೆ ಕೇಂದ್ರದಲ್ಲಿ ಬಂಧನಕ್ಕೊಳಗಾದ ತನ್ನ 27 ವರ್ಷದ ಗಂಡನ ಬಗ್ಗೆ ಮಾಹಿತಿ ಕೇಳುತ್ತಿರುವುದು ಕಂಡುಬಂದಿತು. ತನ್ನ ಗಂಡನನ್ನು ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯಲಾಯಿತು ಎಂದು ನಂತರ ಆಕೆ ಮಾಧ್ಯಮಗಳಿಗೆ ತಿಳಿಸಿದಳು. ತನ್ನ ಪತಿ ಮೆಕ್ಸಿಕೊದಲ್ಲಿ ಉಳಿಯಲು ಅನುಮತಿಸುವ ದಾಖಲೆಗಳನ್ನು ಹೊಂದಿದ್ದಾರೆ ಎಂದು ಆಕೆ ಹೇಳಿದರು.
ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರ ಆಡಳಿತವು ವಲಸಿಗರು ಮತ್ತು ಆಶ್ರಯ ಕೇಳಿ ಬರುವವರ ಸಂಖ್ಯೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ಇಂಥ ವಲಸಿಗರು ಅಮೆರಿಕದೊಳಗೆ ಬರಲು ಹಲವಾರು ಅಪಾಯಕಾರಿ ರೀತಿಯಲ್ಲಿ ಪ್ರಯಾಣ ಮಾಡುತ್ತಾರೆ. ಕೋವಿಡ್ ಸಂಬಂಧಿತ ನಿಯಂತ್ರಣಗಳನ್ನು ತೆಗೆದುಹಾಕಿದ ನಂತರ ಬಿಡೆನ್ ದಕ್ಷಿಣ ಗಡಿಗೆ ವಲಸೆ ಹೋಗುವವರ ಸಂಖ್ಯೆಯನ್ನು ನಿಗ್ರಹಿಸುವ ಆಶಯದೊಂದಿಗೆ ಫೆಬ್ರವರಿಯಲ್ಲಿ ವಲಸೆ ಬರುವವರ ಮೇಲೆ ಹೊಸ ನಿರ್ಬಂಧಗಳನ್ನು ಪ್ರಸ್ತಾಪಿಸಿದರು.
ಹೊಸ ನಿಯಮಗಳ ಪ್ರಕಾರ, ಗಡಿಗೆ ಬಂದು ಸುಮ್ಮನೆ ಅಮೆರಿಕದೊಳಗೆ ನುಗ್ಗುವ ವಲಸಿಗರಿಗೆ ಇನ್ನು ಮುಂದೆ ದೇಶದಲ್ಲಿ ಯಾವುದೇ ರೀತಿಯಿಂದಲೂ ಆಶ್ರಯ ನೀಡಲಾಗುವುದಿಲ್ಲ. ಹೀಗೆ ಬರುವವರು ತಾವು ಹಾದು ಬರುವ ಯಾವುದಾದರೂ ದೇಶದ ನಾಗರಿಕತೆಗೆ ಅರ್ಜಿ ಸಲ್ಲಿಸಬೇಕು ಅಥವಾ ಅಮೆರಿಕ ಸರ್ಕಾರದ ಆ್ಯಪ್ ಮೂಲಕ ನಾಗರಿಕತೆಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.
ಪ್ರತಿ ತಿಂಗಳು ಸುಮಾರು 2,00,000 ಜನರು ಮೆಕ್ಸಿಕೋದಿಂದ ಯುನೈಟೆಡ್ ಸ್ಟೇಟ್ಸ್‌ಗೆ ಗಡಿ ದಾಟಲು ಪ್ರಯತ್ನಿಸುತ್ತಾರೆ. ಹೆಚ್ಚಿನವರು ಮಧ್ಯ ಮತ್ತು ದಕ್ಷಿಣ ಅಮೆರಿಕಾದಿಂದ ಬಂದವರಾಗಿರುತ್ತಾರೆ. ಬಡತನ ಮತ್ತು ಹಿಂಸೆಯ ಕಾರಣದಿಂದ ತಾವು ತಮ್ಮ ದೇಶಗಳನ್ನು ತೊರೆದು ಬಂದಿರುವುದಾಗಿ ಇವರು ಹೇಳಿಕೊಳ್ಳುತ್ತಾರೆ. ಇಂಟರ್‌ನ್ಯಾಶನಲ್ ಆರ್ಗನೈಸೇಶನ್ ಫಾರ್ ಮೈಗ್ರೇಶನ್‌ನ ಇತ್ತೀಚಿನ ವರದಿಯ ಪ್ರಕಾರ, 2014 ರಿಂದ ಸುಮಾರು 7,661 ವಲಸಿಗರು ಯುನೈಟೆಡ್ ಸ್ಟೇಟ್ಸ್‌ಗೆ ಹೋಗುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾರೆ ಅಥವಾ ಕಣ್ಮರೆಯಾಗಿದ್ದಾರೆ. ಹಾಗೆಯೇ 988 ಜನರು ಅಪಘಾತಗಳಲ್ಲಿ ಅಥವಾ ಕೆಟ್ಟ ಪರಿಸ್ಥಿತಿಗಳಲ್ಲಿ ಪ್ರಯಾಣಿಸುವಾಗ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ : ಜಿಗಣಿ ಪಟ್ಟಣದಲ್ಲಿ ಆಟೋ ಮೊಬೈಲ್ಸ್ ಆಯಿಲ್ ಅಂಗಡಿಗೆ ಬೆಂಕಿ: 22 ಲಕ್ಷ ರೂ. ಸರಕು ಸುಟ್ಟು ಭಸ್ಮ