ಕೀವ್( ಉಕ್ರೇನ್): ಉಕ್ರೇನ್‌ನೊಂದಿಗಿನ ಸಂಘರ್ಷಕ್ಕೆ ರಷ್ಯಾ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಎಚ್ಚರಿಸಿದ್ದಾರೆ. ನಮ್ಮ ಮೇಲೆ ದಾಳಿ ಮಾಡುವ ಮೂಲಕ, ಕಳೆದ 25 ವರ್ಷಗಳಲ್ಲಿ ರಷ್ಯಾ ಗಳಿಸಿಕೊಂಡ ಜನಪ್ರೀಯತೆ ಸೇರಿ ಎಲ್ಲವನ್ನೂ ಕಳೆದುಕೊಳ್ಳುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗೆ ಶುಕ್ರವಾರ ದೂರವಾಣಿ ಕರೆ ಮಾಡಿ ಮಾತನಾಡಿದ ಅಧ್ಯಕ್ಷ ಝೆಲೆನ್ಸ್ಕಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು, ನಮ್ಮೊಂದಿಗಿನ ಮಾತುಕತೆ ಹಾಗೂ ಸಂಧಾನ ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ವಿಳಂಬಗೊಳಿಸಲು ನೋಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಅಷ್ಟೇ ಅಲ್ಲ ಪುಟಿನ್ ಅವರು ಉಕ್ರೇನ್ ಮುಂದೆ ಹೆಚ್ಚು ಅವಾಸ್ತವಿಕ ಪ್ರಸ್ತಾಪಗಳನ್ನು ಮುಂದಿಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಉಕ್ರೇನಿಯನ್ ಮತ್ತು ರಷ್ಯಾದ ನಿಯೋಗಗಳು ಎರಡು ದೇಶಗಳ ನಡುವಿನ ಸಂಘರ್ಷಕ್ಕೆ ಕೊನೆ ಹಾಡಲು ಈಗಾಗಲೇ ಹಲವು ಸುತ್ತಿನ ಮಾತುಕತೆಗಳನ್ನು ನಡೆಸುತ್ತಿವೆ. ಆದರೂ ಇದುವರೆಗೂ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.
ಇದನ್ನು ಓದಿ:ಉಕ್ರೇನ್ ಅಧ್ಯಕ್ಷರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡುವಂತೆ ಯೂರೋಪ್ ಒತ್ತಡ