ಲಂಡನ್ (ಯು.ಕೆ): ಭಾರತೀಯ ಮೂಲದ ಪ್ರಾಧ್ಯಾಪಕರನ್ನು ಹೊಂದಿರುವ ಆಕ್ಸ್‌ಫರ್ಡ್ ಮೂಲದ ಕಂಪನಿಯು ತನ್ನ ಭಾರತೀಯ ಪಾಲುದಾರ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐಪಿಎಲ್) ಮೂಲಕ ಕೋವಿಡ್-19 ವಿರುದ್ಧ ಹೋರಾಡಲು ಲಸಿಕೆಯ ಪ್ರಯೋಗಗಳನ್ನು ಪ್ರಾರಂಭಿಸಿದೆ ಎಂದು ಪ್ರಕಟಿಸಿದೆ.
ಸಾಂಕ್ರಾಮಿಕ ರೋಗಗಳು, ಕ್ಯಾನ್ಸರ್ ಮತ್ತು ದೀರ್ಘ ಕಾಲದ ಕಾಯಿಲೆಗಳನ್ನು ಗುರಿಯಾಗಿಸಿಕೊಂಡು ಲಸಿಕೆಯ ಪ್ರಯೋಗ ಪ್ರಾರಂಭವಾಗಿದೆ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸ್ಪಿನಾಫ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸ್ಪೈಬಯೋಟೆಕ್‌ನ ಸಹ ಸಂಸ್ಥಾಪಕ ಪ್ರೊ. ಸುಮಿ ಬಿಸ್ವಾಸ್ ಹೇಳಿದ್ದಾರೆ. ಮೊದಲ ಹಂತದ ಡೋಸೇಜ್ನ ಪ್ರಯೋಗ ಈಗಾಗಲೇ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಪ್ರಾರಂಭಿಸಲಾದ ಅಧ್ಯಯನದ ಭಾಗವಾಗಿ ಲಸಿಕೆ ಅಭಿವೃದ್ಧಿಗಾಗಿ ಎಸ್‌ಐಐಪಿಎಲ್‌ನೊಂದಿಗೆ ವಿಶೇಷ ಜಾಗತಿಕ ಪರವಾನಗಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಸ್ಪೈಬಯೋಟೆಕ್ ಹೇಳಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೂಕ್ಷ್ಮ ಜೀವವಿಜ್ಞಾನವನ್ನು ಅಧ್ಯಯನ ಮಾಡಿರುವ ಪ್ರೊ. ಸುಮಿ ಬಿಸ್ವಾಸ್ 2005ರಲ್ಲಿ ಯುಕೆಗೆ ತೆರಳಿದ್ದು, ಅಲ್ಲಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಜೆನ್ನರ್ ಇನ್‌ಸ್ಟಿಟ್ಯೂಟ್‌ನಲ್ಲಿ ವ್ಯಾಕ್ಸಿನಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.