ಹೈದರಾಬಾದ್: ಕೊರೊನಾ ವೈರಸ್ನಿಂದ ಜಗತ್ತಿನಲ್ಲಿ ಉಂಟಾಗಿರುವ ಈ ಸಂಕಷ್ಟ 'ಮಾನವ ಕುಲದ ಕರಾಳ ಅಧ್ಯಾಯ'ವಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿಯೆವಾ ಹೇಳಿದ್ದಾರೆ.
ಕಳೆದ 75 ವರ್ಷಗಳಲ್ಲಿ ಇಂಥದೊಂದು ಬಿಕ್ಕಟ್ಟು ಯಾವತ್ತೂ ಉದ್ಭವಿಸಿರಲಿಲ್ಲ. ಕೊರೊನಾ ವೈರಸ್ ವಿರುದ್ಧ ಹೋರಾಡಲು ಐಎಂಎಫ್ ತನ್ನ ತುರ್ತು ನಿಧಿಯ ಲಭ್ಯತೆಯನ್ನು ದ್ವಿಗುಣಗೊಳಿಸಿದೆ. ತುರ್ತು ನಿಧಿ ಅಗತ್ಯವಿರುವ ದೇಶಗಳಿಗೆ ಈ ಮುನ್ನ ನೀಡಲಾಗುತ್ತಿದ್ದ 50 ಬಿಲಿಯನ್ ಡಾಲರ್ ಬದಲು 100 ಬಿಲಿಯನ್ಗೆ ಹೆಚ್ಚಿಸಲಾಗಿದೆ ಎಂದು ವಿಶ್ವಸಂಸ್ಥೆ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.
ತುರ್ತುನಿಧಿ ಬಿಡುಗಡೆಗಾಗಿ ರಾಷ್ಟ್ರಗಳ ಮನವಿ:
ದಾಖಲೆಯ 85 ರಾಷ್ಟ್ರಗಳು ತುರ್ತುನಿಧಿ ಬಿಡುಗಡೆಗಾಗಿ ಮನವಿ ಸಲ್ಲಿಸಿವೆ. ಕೊರೊನಾ ವೈರಸ್ ಸೃಷ್ಟಿಸಿರುವ ಭೀಕರ ಪರಿಸ್ಥಿತಿಯನ್ನು ಇದು ಸೂಚಿಸುತ್ತದೆ. ನಮ್ಮಿಂದ ಹಣಕಾಸು ಬೇಡಿಕೆಯ ಪ್ರಮಾಣ ಆಕಾಶದೆತ್ತರಕ್ಕೇರಿದೆ. ಈ ಸಮಯದಲ್ಲಿ ಅಭಿವೃದ್ಧಿಶೀಲ ಹಾಗೂ ಹಿಂದುಳಿದ ರಾಷ್ಟ್ರಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ನಮ್ಮ ಬಳಿ ಸದ್ಯ 1 ಟ್ರಿಲಿಯನ್ ಡಾಲರ್ ನಿಧಿ ಇದ್ದು, ಅರ್ಥವ್ಯವಸ್ಥೆಯ ಕುಸಿತ ತಡೆಗೆ ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಜಾರ್ಜಿಯೆವಾ ಮಾಹಿತಿ ನೀಡಿದರು.