ಕಾಬೂಲ್(ಆಫ್ಘಾನಿಸ್ತಾನ್): ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಸೃಷ್ಟಿಸಿರುವ ಅರಾಜಕತೆಯಿಂದ ಬೇಸತ್ತಿರುವ ಅಲ್ಲಿನ ನಿವಾಸಿಗಳು ದೇಶ ತೊರೆಯುವ ಧಾವಂತದಲ್ಲಿದ್ದಾರೆ. ಇದರ ನಡುವೆ ಅಮೆರಿಕ, ಬ್ರಿಟನ್, ಕೆನಡಾ ಸೇರಿದಂತೆ ವಿವಿಧ ದೇಶಗಳು ತಮ್ಮ ಜನರ ಏರ್‌ಲಿಫ್ಟ್ ಕಾರ್ಯದ ಕೊನೆಯ ಹಂತ ತಲುಪಿದ್ದು, 20 ವರ್ಷಗಳಿಂದ ಅಫ್ಘಾನಿಸ್ತಾನಕ್ಕೆ ನೀಡಿದ್ದ ಬೆಂಬಲಕ್ಕೆ ಈ ಮಿತ್ರ ರಾಷ್ಟ್ರಗಳು ಅಂತ್ಯ ಹಾಡಿವೆ.
ಇದೇ ವೇಳೆ, ಅನೇಕ ನಾಗರಿಕರು ಹಾಗೂ ಹಲವು ವರ್ಷಗಳಿಂದ ಸಹಾಯ ಮಾಡಿದ ಸ್ಥಳೀಯ ನಿವಾಸಿಗಳನ್ನು ಬಿಟ್ಟು ಹೋಗುತ್ತಿರುವುದನ್ನು ಈ ದೇಶಗಳ ನಾಯಕರು ಒಪ್ಪಿಕೊಂಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ತಾಲಿಬಾನಿಗಳು ನಿನ್ನೆ ಕಾಬೂಲ್ ವಿಮಾನ ನಿಲ್ದಾಣವನ್ನು ಸಂಪೂರ್ಣವಾಗಿ ಮುಚ್ಚಿದ್ದಾರೆ. ಆಗಸ್ಟ್ 31ರ ಗಡುವನ್ನು ಅಮೆರಿಕ ಅಧ್ಯಕ್ಷ ಬೈಡನ್ ವಾಪಸ್ ಪಡೆದಿದ್ದು, ಮತ್ತೊಂದೆಡೆ, ಇತರೆ ರಾಷ್ಟ್ರಗಳ ಪ್ರಜೆಗಳು ಇಲ್ಲಿಂದ ಸ್ಥಳಾಂತರ ಆಗುವವರೆಗೆ ತಾಲಿಬಾನಿಗಳ ಜೊತೆ ಕೆಲಸ ಮಾಡುವುದಾಗಿ ಪಾಶ್ಚಿಮಾತ್ಯ ನಾಯಕರು ಹೇಳಿದ್ದಾರೆ.
ಇದನ್ನೂ ಓದಿ: ಮುಂದಿನ 4 ತಿಂಗಳಲ್ಲಿ ಅಫ್ಘಾನಿಸ್ತಾನದಿಂದ 5 ಲಕ್ಷ ಮಂದಿ ವಲಸೆ ಸಾಧ್ಯತೆ: UNHCR
ಕಾಬೂಲ್ ವಿಮಾನ ನಿಲ್ದಾಣದಿಂದ ಕಳೆದ 15 ದಿನಗಳಲ್ಲಿ 1,13,500 ಮಂದಿಯನ್ನು ಸ್ಥಳಾಂತರಿಸಿರುವುದಾಗಿ ಅಮೆರಿಕ ಹೇಳಿದೆ. ಸೇನಾ ಕಮಾಂಡರ್‌ಗಳ ಮಾಹಿತಿ ಆಧರಿಸಿ ಕಾಬೂಲ್‌ನಲ್ಲಿ ಮುಂದಿನ 24-36 ಗಂಟೆಗಳಲ್ಲಿ ಮತ್ತೊಂದು ದೊಡ್ಡ ದಾಳಿಯಾಗುವ ಸಾಧ್ಯತೆ ಇದೆ ಎಂದು ಅಧ್ಯಕ್ಷ ಬೈಡನ್ ಎಚ್ಚರಿಸಿದ್ದಾರೆ. ಜೊತೆಗೆ ಅಮೆರಿಕ ಸೇನೆ ವಿಮಾನ ನಿಲ್ದಾಣದ ಪ್ರದೇಶದಿಂದ ದೂರ ಇರುವಂತೆಯೂ ಯುಎಸ್ ರಾಯಭಾರಿ ಕಚೇರಿ ಎಚ್ಚರಿಕೆ ನೀಡಿದೆ.
ತನ್ನ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳುವ ಸಂಪೂರ್ಣ ಪ್ರಕ್ರಿಯೆಯನ್ನು ಬ್ರಿಟನ್ ನಿನ್ನೆಯಷ್ಟೇ ಪೂರ್ಣಗೊಳಿಸಿದೆ. ಅಫ್ಘಾನ್‌ನಲ್ಲಿ ತಾಲಿಬಾನಿಗಳಿಂದ ಸಂಕಷ್ಟಕ್ಕೆ ಸಿಲುಕಿರುವವರನ್ನು ಮುಂದಿನ ದಿನಗಳಲ್ಲಿ ಸ್ಥಳಾಂತರ ಮಾಡುವುದಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಕಾಬೂಲ್ ಏರ್ಪೋರ್ಟ್ನಲ್ಲಿ 24-36 ಗಂಟೆಯಲ್ಲಿ ಮತ್ತೊಂದು ಉಗ್ರ ದಾಳಿ: ಬೈಡನ್ ಎಚ್ಚರಿಕೆ