ಢಾಕಾ( ಬಾಂಗ್ಲಾದೇಶ): 1971 ರಲ್ಲಿ ನಡೆದ ಸ್ವಾತಂತ್ರ್ಯ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ದೌರ್ಜನ್ಯಗಳು ಬಾಂಗ್ಲಾದೇಶಕ್ಕೆ ಅಚಲವಾದ ನೆನಪುಗಳು ಎಂದು ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.
ನಾವು 1971ರ ಘಟನೆಗಳನ್ನು ಮರೆಯಲು ಸಾಧ್ಯವಿಲ್ಲ. ಅಂದಿನ ನೋವು ಇನ್ನೂ ಶಾಶ್ವತವಾಗಿ ಉಳಿದಿದೆ ಎಂದು ಹಸೀನಾ ಅವರು ಪಾಕಿಸ್ತಾನದ ಹೈಕಮಿಷನರ್ ಇಮ್ರಾನ್ ಅಹ್ಮದ್ ಸಿದ್ದಿಕಿ ಅವರೊಂದಿಗೆ ಮಾತನಾಡುತ್ತಾ ಹೇಳಿದರು. ರಾಷ್ಟ್ರಪಿತ ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಕುರಿತ ಗುಪ್ತಚರ ಶಾಖೆಯ ರಹಸ್ಯ ದಾಖಲೆಗಳು ಎಂಬ ಪುಸ್ತಕದ ಸಂಪುಟಗಳನ್ನು ಉಲ್ಲೇಖಿಸಿ, 1948 ಮತ್ತು 1971 ರ ನಡುವಿನ ಅನೇಕ ಐತಿಹಾಸಿಕ ಸಂಗತಿಗಳನ್ನು ಎಲ್ಲರೂ ಪುಸ್ತಕಗಳಿಂದ ಮನವರಿಕೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಶೇಖ್ ಮುಜಿಬುರ್ ರಹಮಾನ್ ಅವರ "ಪೂರ್ಣಗೊಳಿಸದ ನೆನಪುಗಳು" ಎಂಬ ಪುಸ್ತಕದ ಉರ್ದು ಆವೃತ್ತಿ ಪಾಕಿಸ್ತಾನದಲ್ಲಿ ಹೆಚ್ಚು ಮಾರಾಟವಾಗಿದೆ. ಪುಸ್ತಕವು ಪಾಕಿಸ್ತಾನ ಮತ್ತು ಇತರ ದೇಶಗಳಲ್ಲಿ ಹೆಚ್ಚು ಓದಿಸಿಕೊಂಡಿದೆ ಎಂದಿದ್ದಾರೆ.
ಇನ್ನು ತಮ್ಮ ದೇಶವು ಬಾಂಗ್ಲಾದೇಶದೊಂದಿಗಿನ ಸಂಬಂಧವನ್ನು ಬಲಪಡಿಸಲು ಬಯಸಿದೆ ಎಂದು ಪಾಕಿಸ್ತಾನ ಹೈಕಮಿಷನರ್ ಹೇಳಿದ್ದಾರೆ ಎಂದು ಖಾಸಗಿ ಮಾಧ್ಯಮ ವರದಿ ಮಾಡಿದೆ. ಅಂತೆಯೇ ಅಂತಾರಾಷ್ಟ್ರೀಯ ರಂಗದಲ್ಲಿ ಬಾಂಗ್ಲಾದೇಶದ ಪ್ರಧಾನ ಮಂತ್ರಿಯ ನಾಯಕತ್ವವನ್ನೂ ಕೂಡ ಅಭಿನಂದಿಸಲಾಗಿದೆ. ಬಾಂಗ್ಲಾದೇಶದ ವಿದೇಶಾಂಗ ನೀತಿ "ಸ್ನೇಹ ಎಲ್ಲರೊಂದಿಗೆ, ದುರುದ್ದೇಶ ಯಾರೊಂದಿಗೂ ಇಲ್ಲ "ಎಂದು ಹಸೀನಾ ಅವರ ಹೇಳಿಕೆಯನ್ನು ಕೋಟ್ ಮಾಡಿ ಖಾಸಗಿ ಮಾಧ್ಯಮ ವರದಿ ಮಾಡಿದೆ.
ಕೋಮು ಸೌಹಾರ್ದತೆಯು ಬಾಂಗ್ಲಾದೇಶದ ಸಂವಿಧಾನವನ್ನು ಎತ್ತಿ ಹಿಡಿಯುವ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ. ಸಾವಿರಾರು ವರ್ಷಗಳಿಂದ ಬಂಗಾಳಿ ಸಂಸ್ಕೃತಿಯಲ್ಲಿ ಧಾರ್ಮಿಕ ಸಾಮರಸ್ಯವಿದೆ. ಶೇಖ್ ಮುಜಿಬುರ್ ರಹಮಾನ್ ತಮ್ಮ ಭಾಷಣವೊಂದರಲ್ಲಿ, "ಈ ಬಂಗಾಳದಲ್ಲಿ ಹಿಂದೂಗಳು, ಮುಸ್ಲಿಮರು, ಬಂಗಾಳಿಗಳು, ಬಂಗಾಳೇತರರು ಇದ್ದಾರೆ. ಅವರು ನಮ್ಮ ಸಹೋದರರು. ನಾವು ಅಪಖ್ಯಾತಿಗೆ ಒಳಗಾಗದಂತೆ ಅವರನ್ನು ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ" ಎಂದು ಹೇಳಿದ್ದರು.