ಕಠ್ಮಂಡು (ನೇಪಾಳ): ಪ್ರಧಾನಿ ಕೆ ಪಿ ಶರ್ಮಾ ಒಲಿ ಅವರ ಭವಿಷ್ಯವನ್ನು ನಿರ್ಧರಿಸುವ ನೇಪಾಳದ ಕಮ್ಯುನಿಸ್ಟ್ ಪಕ್ಷದ(ಎನ್‌ಸಿಪಿ) ನಿರ್ಣಾಯಕ ಸ್ಥಾಯಿ ಸಮಿತಿ ಸಭೆಯನ್ನು ಬುಧವಾರದವರೆಗೆ ಮುಂದೂಡಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಸಭೆಯನ್ನು ಬುಧವಾರಕ್ಕೆ ಮುಂದೂಡಲಾಗಿದೆ ಎಂದು ಪ್ರಧಾನಿ ಕೆ ಪಿ ಶರ್ಮಾ ಒಲಿಯ ಪತ್ರಿಕಾ ಸಲಹೆಗಾರ ಸೂರ್ಯ ಥಾಪಾ ಹೇಳಿದ್ದಾರೆ. ಸಭೆಯನ್ನು ಮುಂದೂಡಿದ ಕಾರಣ ತಿಳಿದು ಬಂದಿಲ್ಲ.
ಈ ಹಿಂದೆ ಶನಿವಾರ ನಡೆಯಬೇಕಿದ್ದ ಸಭೆಯನ್ನ ನೇಪಾಳದ ಕಮ್ಯುನಿಸ್ಟ್ ಪಕ್ಷದ ಉನ್ನತ ನಾಯಕರು ಮಹೋನ್ನತ ವಿಷಯಗಳ ಬಗ್ಗೆ ತಿಳಿವಳಿಕೆಯನ್ನು ರೂಪಿಸಲು ಹೆಚ್ಚಿನ ಸಮಯ ಬೇಕಾಗಿದ್ದರಿಂದ ಸೋಮವಾರ ಎಂದರೆ ಇಂದಿಗೆ ಮುಂದೂಡಲಾಗಿತ್ತು.
ಪಕ್ಷದ ಅತ್ಯಂತ ಶಕ್ತಿಶಾಲಿ ಸಂಸ್ಥೆಯಾದ ಎನ್‌ಸಿಪಿಯ 45 ಸದಸ್ಯರ ಸ್ಥಾಯಿ ಸಮಿತಿಯ ನಿರ್ಣಾಯಕ ಸಭೆ ಇದಾಗಿತ್ತು. ಮಾಜಿ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ಸೇರಿದಂತೆ ಎನ್‌ಸಿಪಿ ಉನ್ನತ ನಾಯಕರು ಪ್ರಧಾನಿ ಒಲಿ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಕೆ ಪಿ ಶರ್ಮಾ ಒಲಿ ಅವರ ಇತ್ತೀಚಿನ ಭಾರತ ವಿರೋಧಿ ಹೇಳಿಕೆಗಳು ರಾಜಕೀಯವಾಗಿ ಸರಿಯಾಗಿಲ್ಲ ಹಾಗೂ ರಾಜತಾಂತ್ರಿಕವಾಗಿ ಸೂಕ್ತವಲ್ಲ ಎಂದು ಅವರು ಹೇಳಿದ್ದಾರೆ.