ಇಸ್ಲಾಮಾಬಾದ್: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನಲ್ಲಿ ಇದೇ ಮೊದಲ ಬಾರಿಗೆ ಹಿಂದೂ ದೇಗುಲ ನಿರ್ಮಾಣಗೊಳ್ಳಲಿದೆ. ಹಿಂದೂ ಸಮುದಾಯದ ಮುಖಂಡರು ನಿರ್ಮಾಣ ಕಾರ್ಯಕ್ಕೆ ಇಂದು ಅಡಿಗಲ್ಲು ಹಾಕಿದ್ದಾರೆ.
ಇಸ್ಲಾಮಾಬಾದ್ನ ಹಿಂದೂ ಪಂಚಾಯತ್ ದೇವಸ್ಥಾನಕ್ಕೆ ಶ್ರೀಕೃಷ್ಣ ಮಂದಿರ ಎಂದು ಹೆಸರಿಟ್ಟಿದೆ. ಅಲ್ಲಿನ ನಗರಾಭಿವೃದ್ದಿ ಪ್ರಾಧಿಕಾರ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಆದೇಶದಂತೆ ದೇಗುಲ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಿತ್ತು.
ಇದರ ಜೊತೆಗೆ ದೇವಾಲಯದ ಸಂಕೀರ್ಣದಲ್ಲಿ ಹಿಂದೂಗಳ ಶವಸಂಸ್ಕಾರಕ್ಕೂ ಜಾಗ ಮೀಸಲಿಡಲಾಗಿದೆ.
ಇಸ್ಲಾಮಾಬಾದ್ನಲ್ಲಿ ಉಳಿದುಕೊಂಡಿದ್ದ ಹಿಂದೂ ಸಮುದಾಯದವರು ಇಷ್ಟು ದಿನ ತಮ್ಮ ಊರುಗಳಿಗೆ ತೆರಳಿಯೇ ಪೂಜೆ-ಪುನಸ್ಕಾರಗಳಲ್ಲಿ ಭಾಗಿಯಾಗಬೇಕಿತ್ತು. ಆದರೀಗ ತಾವು ವಾಸವಾಗಿರುವ ಸ್ಥಳದಲ್ಲೇ ದೇವಾಲಯ ನಿರ್ಮಾಣಗೊಳ್ಳುತ್ತಿರುವುದು ಅವರಲ್ಲಿ ಸಂತೋಷವನ್ನು ಇಮ್ಮಡಿಗೊಳಿಸಿದೆ.
ಇಸ್ಲಾಮಾಬಾದ್ನ ಹೆಚ್-9 ಸೆಕ್ಟರ್ನಲ್ಲಿ ಈ ದೇವಾಲಯ ನಿರ್ಮಾಣಗೊಳ್ಳಲಿದ್ದು, ಅದಕ್ಕಾಗಿ ಸರ್ಕಾರ 4 ಎಕರೆ ಜಮೀನು ನೀಡಿದೆ. ಅಲ್ಲಿ ನಿರ್ಮಾಣಗೊಳ್ಳುತ್ತಿರುವ ಮೊದಲ ಹಿಂದೂ ದೇವಾಲಯ ಇದಾಗಲಿದೆ.
ಮಾನವ ಹಕ್ಕುಗಳ ಕಾರ್ಯದರ್ಶಿ ಲಾಲ್ ಚಂದ್ ಮಲ್ಹಿ ಮಾತನಾಡಿ, ರಾಜಧಾನಿಯಲ್ಲಿ ವರ್ಷದಿಂದ ವರ್ಷಕ್ಕೆ ಹಿಂದೂ ಸಮುದಾಯದ ಸಂಖ್ಯೆ ಹೆಚ್ಚಾಗುತ್ತಿದೆ. ಇಲ್ಲಿ ದೇವಾಲಯ ನಿರ್ಮಿಸುವುದು ಅನಿವಾರ್ಯ. ಜೊತೆಗೆ ಕಳೆದ ಅನೇಕ ವರ್ಷಗಳಿಂದ ಹಿಂದೂ ಸಮುದಾಯ ದೇಗಲ ನಿರ್ಮಾಣಕ್ಕಾಗಿ ಬೇಡಿಕೆ ಇಟ್ಟಿತ್ತು ಎಂದಿದ್ದಾರೆ.