ಇಸ್ಲಾಮಾಬಾದ್: ಕಳೆದ ಕೆಲ ವರ್ಷಗಳಿಂದ ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಟ ನಡೆಸುತ್ತಿರುವ ನೆರೆಯ ರಾಷ್ಟ್ರ ಪಾಕ್ ಇದೀಗ ಬೇರೆ ರಾಷ್ಟ್ರಗಳಿಂದ ಸಾಲ ಪಡೆದುಕೊಳ್ಳುವುದರಲ್ಲೂ ಹೊಸ ದಾಖಲೆ ನಿರ್ಮಾಣ ಮಾಡಿದೆ.
ಪಾಕಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ 2,804 ಶತಕೋಟಿ ರೂ. ವಿದೇಶಿ ಮೂಲಗಳಿಂದ ಹಾಗೂ 4,705 ಶತಕೋಟಿ ದೇಶೀಯ ಮೂಲಗಳಿಂದ ಸಾಲ ಪಡೆದುಕೊಂಡಿದೆ. ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಇಮ್ರಾನ್ ಖಾನ್ ಸರ್ಕಾರ 7509 ಶತಕೋಟಿ ರೂ.(ಪಾಕಿಸ್ತಾನ ಕರೆನ್ಸಿ) ಸಾಲ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದಿನ ಯಾವುದೇ ಸರ್ಕಾರ ಇಷ್ಟೊಂದು ಕಡಿಮೆ ಅವಧಿಯಲ್ಲಿ ಇಷ್ಟೊಂದು ಮೊತ್ತದ ಸಾಲ ಪಡೆದಿರುವ ಉದಾಹರಣೆ ಇಲ್ಲ. ಆದರೆ ಈ ವಿಷಯದಲ್ಲಿ ಇಮ್ರಾನ್ ಖಾನ್ ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ. ಸದ್ಯ ಪಾಕಿಸ್ತಾನದ ಒಟ್ಟು ಸಾಲದ ಮೊತ್ತ 32,240 ಶತಕೋಟಿ ರೂ.ಗಳಾಗಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಇದರ ಸಾಲದ ಮೊತ್ತ 24,732 ಶತಕೋಟಿ ರೂ. ಆಗಿತ್ತು.
ಕಳೆದ ಕೆಲ ವರ್ಷಗಳಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಪಾಕ್, ಹಣಕಾಸಿನ ತೊಂದರೆ ಅನುಭವಿಸುತ್ತಿದೆ. ಹೀಗಾಗಿ ಸಾಲದ ಸುಳಿಗೆ ಸಿಲುಕಿ ಪಾಕ್ ಒದ್ದಾಡುತ್ತಿದೆ ಎಂದು ತಿಳಿದು ಬಂದಿದೆ.