ಬೀಜಿಂಗ್: ತಾನು ಹಾರಿಬಿಟ್ಟ ಸ್ಪೇಸ್ ಸ್ಟೇಶನ್ನಿನ ಮುಖ್ಯ ಭಾಗವನ್ನು ಬಾಹ್ಯಾಕಾಶಕ್ಕೆ ಸೇರಿಸಿದ ಲಾಂಗ್ ಮಾರ್ಚ್ 5ಬಿ ರಾಕೆಟ್ಟಿನ ಮೇಲ್ಭಾಗವು ಕಳಚಿ ಬೀಳುವಾಗ ಬಹುತೇಕ ಅದು ಸುಟ್ಟುಹೋಗಿರುತ್ತದೆ ಹಾಗೂ ಅದರಿಂದ ತನ್ನ ದೇಶದ ಭೂಪ್ರದೇಶದಲ್ಲಿ ಯಾವುದೇ ರೀತಿಯ ಹಾನಿಗಳುಂಟಾಗುವ ಸಾಧ್ಯತೆ ತೀರಾ ಕಡಿಮೆ ಎಂದು ಚೀನಾ ಹೇಳಿಕೊಂಡಿದೆ.
"ರಾಕೆಟ್ಟಿನ ಮೇಲ್ಭಾಗವು ಭೂಕಕ್ಷೆಗೆ ಮರುಪ್ರವೇಶಿಸುವ ಸಂದರ್ಭವನ್ನು ನಾವು ತೀರಾ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ. ನಾವು ಹಾರಿಬಿಟ್ಟ ಇಂಥ ರಾಕೆಟ್ಟುಗಳು ವಿಶೇಷ ವಿನ್ಯಾಸವನ್ನು ಹೊಂದಿರುತ್ತವೆ ಹಾಗೂ ಇದರ ಬಹುತೇಕ ಭಾಗವು ಭೂಕಕ್ಷೆಗೆ ಮರಳಿ ಪ್ರವೇಶಿಸುವ ಮುನ್ನವೇ ಸುಟ್ಟುಹೋಗಿರುತ್ತದೆ. ಹೀಗಾಗಿ ಈ ರಾಕೆಟ್ಟುಗಳಿಂದ ಭೂಮಿಯ ಮೇಲೆ ಗಂಭೀರ ಪರಿಣಾಮಗಳಾಗುವ ಸಾಧ್ಯತೆ ಕಡಿಮೆ." ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನಬಿಂಗ್ ಹೇಳಿದ್ದಾರೆ.
ಚೀನಾ ಹಾರಿಬಿಟ್ಟ ತನ್ನ ಪ್ರಥಮ ಸ್ಪೇಸ್ ಸ್ಟೇಶನ್ ಅನ್ನು ಬಾಹ್ಯಾಕಾಶ ಕಕ್ಷೆಗೆ ಸೇರಿಸಿದ ರಾಕೆಟ್ಟಿನ ಮುಖ್ಯ ಭಾಗವು ಶನಿವಾರದಂದು ಯಾವುದೇ ಕ್ಷಣದಲ್ಲಿಯೂ ಭೂಮಿಗೆ ಅಪ್ಪಳಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಸಾಮಾನ್ಯವಾಗಿ ಇಂಥ ತ್ಯಾಜ್ಯ ರಾಕೆಟ್ ಭಾಗಗಳು ಸಮುದ್ರದಲ್ಲಿ ಬೀಳುವಂತೆ ಮಾಡಲಾಗುತ್ತದೆ ಅಥವಾ ಗಾಳಿಯಲ್ಲಿಯೇ ಸಂಪೂರ್ಣವಾಗಿ ಬೂದಿಯಾಗುವಂತೆ ಮಾಡಲಾಗುತ್ತದೆ.
ಆದರೆ ತಾನು ಹಾರಿಬಿಟ್ಟ ಬೃಹತ್ ರಾಕೆಟ್ ಲಾಂಗ್ ಮಾರ್ಚ್ 5ಬಿ ಇದರ ಪ್ರಮುಖ ಭಾಗವು ರಿಮೋಟ್ ನಿಯಂತ್ರಣದಲ್ಲಿದೆಯಾ ಅಥವಾ ಇಲ್ಲ ಎಂಬುದನ್ನು ಚೀನಾದ ಬಾಹ್ಯಾಕಾಶ ಸಂಸ್ಥೆ ಖಚಿತಪಡಿಸಿಲ್ಲ. ಕಳೆದ ವರ್ಷದ ಮೇ ತಿಂಗಳಲ್ಲಿ ಚೀನಾದ ಇಂಥದೇ ರಾಕೆಟ್ ಭಾಗವೊಂದು ನಿಯಂತ್ರಣ ತಪ್ಪಿ ಅಟ್ಲಾಂಟಿಕ್ ಓಶಿಯನ್ನಲ್ಲಿ ಬಿದ್ದಿತ್ತು.