ಕಠ್ಮಂಡು: ವರುಣನ ಆರ್ಭಟದಿಂದಾಗಿ ನೇಪಾಳ ಹಾಗೂ ಭೂತಾನ್ನಲ್ಲಿ ಸಂಭವಿಸಿದ ಪ್ರವಾಹ, ಭೂ ಕುಸಿತದಲ್ಲಿ ಈವರೆಗೆ ಒಟ್ಟು 26 ಮಂದಿ ಸಾವನ್ನಪ್ಪಿದ್ದು, ಅನೇಕರು ನಾಪತ್ತೆಯಾಗಿದ್ದಾರೆ. ಅನೇಕ ಪ್ರದೇಶಗಳು ಮುಳುಗಡೆಯಾಗಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಾಶವಾಗಿದೆ.
ನೇಪಾಳದ ಸಿಂಧುಪಾಲ್‌ಚೋಕ್, ಮನಂಗ್ ಸೇರಿ ಆರು ಜಿಲ್ಲೆಗಳು ಭೀಕರ ಪ್ರವಾಹಕ್ಕೆ ತುತ್ತಾಗಿವೆ. ನೇಪಾಳದಲ್ಲಿ ಮೂವರು ವಿದೇಶಿ ಪ್ರಜೆಗಳು ಸೇರಿ 16 ಮಂದಿ ಮೃತಪಟ್ಟಿದ್ದು, 26 ಜನರು ನಾಪತ್ತೆಯಾಗಿದ್ದಾರೆ. ಸಿಂಧುಪಾಲ್‌ಚೋಕ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಕುಡಿಯುವ ನೀರಿನ ಯೋಜನೆಯೊಂದರ ಕಾಮಗಾರಿ ವೇಳೆ ಓರ್ವ ಭಾರತೀಯ ಹಾಗೂ ಇಬ್ಬರು ಚೀನಾ ಮೂಲದ ಕಾರ್ಮಿಕರು ಬಲಿಯಾಗಿದ್ದಾರೆ.
ಇತ್ತ ನೆರೆಯ ನೇಪಾಳದ ನೆರೆಯ ರಾಷ್ಟ್ರ ಭೂತಾನ್ನಲ್ಲಿ 10 ಮಂದಿ ಬಲಿಯಾಗಿದ್ದು, ಹಲವರು ಕಾಣೆಯಾಗಿದ್ದಾರೆ. ರಕ್ಷಣಾ ಪಡೆಗಳು ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ನೇಪಾಳ ಹಾಗೂ ಭೂತಾನ್ ಗುಡ್ಡಗಾಡು ಪ್ರದೇಶಗಳಿಂದ ಕೂಡಿರುವುದರಿಂದ ಪ್ರತಿವರ್ಷ ಮಳೆಗಾಲದಲ್ಲಿ ಪ್ರವಾಹ-ಭೂ ಕುಸಿತದಂತಹ ಸಮಸ್ಯೆಗಳು ಎದುರಾಗಿ ನೂರಾರು ಜನರು ಪ್ರಾಣ ಕಳೆದುಕೊಳ್ಳುತ್ತಾರೆ.